road 
ಬೆಂಗಳೂರು ಗ್ರಾಮಾಂತರ

ಗೋಕರೆ ರಸ್ತೆ ಒತ್ತುವರಿ ತೆರವು ಶೀಘ್ರ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಕರೆ ಗ್ರಾಮದ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಟಿ.ಅಗ್ರಹಾರ ಗ್ರಾಮ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ರಸ್ತೆಯಲ್ಲಿ ಸರ್ವೆ ಸಂಖ್ಯೆಗಳಲ್ಲಿನ ಕೃಷಿ ಜಮೀನುಗಳಿದ್ದು ರಸ್ತೆಯನ್ನು ಅಳತೆ ಮಾಡಿ ರಸ್ತೆ ಜಾಗವನ್ನು ಗುರುತಿಸಿಕೊಡುವಂತೆ ದೇವನಹಳ್ಳಿ ಭೂಮಾಪಕ ಇಲಾಖೆಗೆ ಯಲಿಯೂರು ಪಂಚಾಯಿತಿ ಪತ್ರ ಬರೆದಿದೆ. ಅಲ್ಲದೆ ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ ಅಳತೆ ಮಾಡಿ ಒತ್ತುವರಿ ತೆರವು ಸಂಬಂಧ ದೇವನಹಳ್ಳಿ ತಾಪಂ ಇಒ ಕಚೇರಿಯಿಂದ ತಹಸೀಲ್ದಾರ್‌ಗೆ ಪತ್ರ ರವಾನಿಸಲಾಗಿದೆ.
ಜಾಗ ಗುರುತಿಸಿದ ಬಳಿಕ ಅಭಿವೃದ್ಧಿ:
ಶೀಘ್ರವಾಗಿ ರಸ್ತೆಯನ್ನು ಅಳತೆ ಮಾಡಿ ರಸ್ತೆಯನ್ನು ಗುರುತಿಸಿಕೊಟ್ಟರೆ ತ್ವರಿತವಾಗಿ ರಸ್ತೆ ಅಭಿವೃದ್ಧಿ ಕ್ರಮಕೈಗೊಳ್ಳುವ ಭರವಸೆ ವ್ಯಕ್ತವಾಗಿದೆ. ಈ ಬಗ್ಗೆ ಸಿಎಂ ಕಚೇರಿ ವಿಶೇಷ ಕರ್ತವ್ಯ ಅಧಿಕಾರಿಗಳಿಗೆ ದೇವನಹಳ್ಳಿ ತಾಪಂ ಇಒ ವರದಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಪಿಆರ್‌ಇಡಿ ಇಂಜಿನಿಯರ್ ಹಾಗೂ ಯಲಿಯೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ವೆ ನಡೆಸಿದ್ದು,
ಗೋಕರೆ ಗ್ರಾಮದ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಟಿ ಅಗ್ರಹಾರ ಗ್ರಾಮದವರೆಗಿನ ಸುಮಾರು 2 ಕಿ.ಮೀ ಉದ್ದದ ರಸ್ತೆಯಲ್ಲಿ ಖಾಸಗಿಯವರು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಗ್ರಾಪಂಗೆ ದೂರು ನೀಡಿದ್ದರು. ಇದರಿಂದ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಿಎಂ ಜನಸ್ಪಂದನಕ್ಕೂ ದೂರು ಸಲ್ಲಿಸಲಾಗಿತ್ತು. ಇಷ್ಟಾದರೂ ಯಾವುದೇ ಕ್ರಮವಾಗಿರಲಿಲ್ಲ. ಕಡೆಗೂ ಸಿಎಂ ಕಚೇರಿಯ ಆದೇಶದಂತೆ ಯಲಿಯೂರು ಗ್ರಾಪಂ ಸಿಬ್ಬಂದಿ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ರಸ್ತೆ ಒತ್ತುವರಿಯಾಗಿರುವುದು ಕಂಡುಬಂದಿರುವ ಬಗ್ಗೆ ತಾಪಂ ಇಒಗೆ ವರದಿ ಸಲ್ಲಿಸಿದ್ದರು.
ವರದಿ ಪರಿಣಾಮ:
‘ ಸಿಎಂ ಕಚೇರಿ ಸೂಚಿಸಿದರೂ ದುರಸ್ತಿ ಕಾಣದ ಗೋಕರೆ ಗ್ರಾಮದ ರಸ್ತೆ’ ಶೀರ್ಷಿಕೆಯಡಿ ಆ.4 ರಂದು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ಡಾ.ವಾಸಂತಿ ಅಮರ್ ತಕ್ಷಣ ದೇವನಹಳ್ಳಿ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ರಸ್ತೆ ಒತ್ತುವರಿಯಾಗಿದ್ದು, ರಸ್ತೆ ಅಳತೆ ಮಾಡಿ ರಸ್ತೆ ಜಾಗ ಗುರುತಿಸಿಕೊಡುವಂತೆ ಭೂಮಾನ ಇಲಾಖೆ ಹಾಗೂ ತಹಸೀಲ್ದಾರ್‌ಗೆ ಮನವಿ ಮಾಡಿದೆ.