ವಿಜಯಪುರ : ಪಟ್ಟಣದಲ್ಲಿ ಕರಗ ಭವನ ನಿಮಾರ್ಣಕ್ಕೆ ಸರ್ಕಾರದಿಂದ ಜಾಗ ಮಂಜೂರು ಮಾಡುವಂತೆ ಕೋರಿ ವಿಜಯಪುರ ಟೌನ್ ತಿಗಳ ಸಮುದಾಯದ ಹಲವು ಮುಖಂಡರು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರತಿ ವರ್ಷ ವಿಜಯಪುರದಲ್ಲಿ ಧರ್ಮರಾಯಸ್ವಾಮಿ ದೇವಾಲಯ ಹಾಗೂ ಎಲ್ಲಮ್ಮದೇವಿ ದೇವಾಲಯದ ಸಮಿತಿಯಿಂದ ವಿಜೃಂಭಣೆಯಿಂದ ಕರಗ ಮಹೋತ್ಸವ ನಡೆಯಲಿದೆ. ಸಾವಿರಾರು ಜನರು ಭಾಗವಹಿಸುತ್ತಾರೆ. ಸರ್ಕಾರದಿಂದ ಕರಗ ಭವನ ನಿಮಾರ್ಣವಾದರೆ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ಪುರಸಭೆ ಮಾಜಿ ಸದಸ್ಯ ವಿ.ನಂದಕುಮಾರ್ ಅವರು ಸಚಿವರಿಗೆ ಮನವಿ ಮಾಡಿದರು.
ಈಗಾಗಲೇ ಕರಗ ಭವನ ನಿಮಾರ್ಣಕ್ಕೆ ಪಟ್ಟಣದ ಜಿ.ಎಂ.ಸರ್ಕಲ್ನಲ್ಲಿರುವ ಪುರಸಭೆಯ ಜಾಗದ ಬಳಕೆಯ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಎರಡು ಬಾರಿ ರೇಜುಲೇಷನ್ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ಜಾಗವನ್ನು ನೀಡಿದರೆ ಕರಗ ಹಾಗೂ ಸಮುದಾಯದ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು.
ಕರಗ ಮಹೋತ್ಸವ ನಡೆಸಲು ಕನ್ನಡ ಮತ್ತು ಸಂಸತಿ ಇಲಾಖೆಯಿಂದ 3 ಲಕ್ಷ ರೂ. ನೀಡಲಾಗುತ್ತಿದೆ. ಇತರೆ ಜಿಲ್ಲೆಗಳಿಗೆ ಕರಗ ಮಹೋತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಲೋಪ ಸರಿಪಡಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ತಿಗಳ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ತಿಗಳ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಆದರೆ ನಿಗಮದಲ್ಲಿ ಅನುದಾನದ ಕೊರತೆಯಿಂದ ಸಮುದಾಯಕ್ಕೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಸರ್ಕಾರದಿಂದ ನಿಗಮಕ್ಕೆ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು ಮತ್ತು ನಾಮನಿದೇರ್ಶನ ಸದಸ್ಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ಕರಗ ಭವನ ನಿಮಾರ್ಣಕ್ಕೆ ಸರ್ಕಾರದಿಂದ ಶೀಘ್ರ ಜಾಗ ಮಂಜೂರಾತಿ ಮಾಡಿಸಿ ಕೊಡಲಾಗುವುದು. ಇತರೆ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದು ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಮಾಜಿ ಸದಸ್ಯ ರಾಜಣ್ಣ, ಮುನೀಂದ್ರ, ಜೆ.ಎಸ್.ರಾಮಚಂದ್ರಪ್ಪ, ಕೆ.ಎಂ.ಮಹೇಶ್, ಜೆ.ಆರ್.ಮುನಿವೀರಣ್ಣ, ಮುನಿಚಿನ್ನಪ್ಪ, ಜಿ.ಎಂ.ಚಂದ್ರು ಇದ್ದರು.