ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ 
ಬೆಂಗಳೂರು ಗ್ರಾಮಾಂತರ

ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ಬಾರಿ ರಾಗಿ ಒಕ್ಕಣೆ ಸಂದರ್ಭದಲ್ಲಿ ಎದುರಾಗುವ ರಾಗಿ ಬೆಳೆ ಕಟಾವು ಯಂತ್ರದ ಬಾಡಿಗೆ ದರದ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಿದ್ದು ಕಳೆದ ಬಾರಿಯಂತೆ ಈ ಬಾರಿಯೂ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ರಾಗಿ ಪ್ರದಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬಹುತೇಕ ರೈತರು ರಾಗಿ ಬೆಳೆಯುತ್ತಿದ್ದು ಕಟಾವು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಬಗ್ಗೆ ಈ ಹಿಂದಿನಿಂದಲೂ ದೂರು ಕೇಳಿಬರುತ್ತಿದೆ. ಖಾಸಗಿಯಾಗಿ ರಾಗಿ ಒಕ್ಕಣೆ ಮಾಡಲು ದುಬಾರಿ ದರ ತೆರಬೇಕಾದ ಪರಿಸ್ಥಿತಿ ಎದುರಾಗುವುದರಿಂದ ರೈತರು ಆತಂಕಗೊಳ್ಳುವುದು ಸಾಮಾನ್ಯವಾಗಿದೆ ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಗಳಿಗೆ ಇಂತಿಷ್ಟು ಎಂದು ವೈಜ್ಞಾನಿಕ ಮಾನದಂಡದಲ್ಲಿ ದರ ನಿಗಧಿಪಡಿಸಿದ್ದು ರಾಗಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆ ತಗ್ಗಲಿದ್ದು ಜಿಲ್ಲಾಡಳಿತದ ಆದೇಶವನ್ನು ಜಿಲ್ಲೆಯ ರೈತರು ಸ್ವಾಗತಿಸಿದ್ದಾರೆ.
61,513 ಹೆಕ್ಟೇರ್‌ನಲ್ಲಿ ರಾಗಿ:
ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 61,513 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ, ಬಹುತೇಕ ರಾಗಿ ಬೆಳೆ ತೆನೆ ತುಂಬುವ ಹಾಗೂ ಕಟಾವು ಹಂತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ರಾಗಿ ಕಟಾವು ಯಂತ್ರಗಳ ಅವಲಂಬನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಟಾವಿನ ಅವಧಿಗೂ ಮುನ್ನವೇ ದರ ನಿಗಧಿಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ದರ ವಸೂಲಿಗೆ ಕಡಿವಾಣ:
ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವು ಮಾಡುವುದು ಸಾಮಾನ್ಯವಾಗಿದೆ. ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಬಾಡಿಗೆ ಹಣ ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರಿಂದ ಸಾಕಷ್ಟು ದೂರು ಬಂದಿವೆ. ಕೆಲವು ದಿನಗಳ ಹಿಂದಷ್ಟೆ ವಿವಿಧ ರೈತಪರ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಾಗಿ ಕಟಾವು ಯಂತ್ರದ ಬಾಡಿಗೆ ದರವನ್ನು ವೈಜ್ಞಾನಿಕವಾಗಿ ನಿಗಧಿಪಡಿಸಬೇಕು ಎಂದು ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ರಾಗಿ ಕಟಾವು ಯಂತ್ರದ ಬಾಡಿಗೆ ದರ ನಿಗಧಿಗೆ ಸಮ್ಮತಿ ಸೂಚಿಸಿದ್ದಾರೆ.
ದರ ಎಷ್ಟು?
ಪ್ರಸ್ತುತ ಇಂಧನ ವೆಚ್ಚ ಹಾಗೂ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿದ್ದು, ಇತರೇ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಯಂತ್ರಕ್ಕೆ ಕಳೆದ ವರ್ಷ ನಿರ್ಧರಿಸಿದಂತೆ, ಪ್ರತಿ ಗಂಟೆಗೆ ನ್ಯೂ ಹಾಲೆಂಡ್, ಜಾನ್ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ಗಂಟೆಗೆ 2700 ರೂಪಾಯಿಗಳು ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಗಂಟೆಗೆ 2200 ರೂಗಳು ಮೀರದಂತೆ ಬಾಡಿಗೆ ನಿಗದಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಗ್ರಾಮಾಂತರ ಜಿಲ್ಲೆ ರಾಗಿ ಪ್ರಧಾನವಾಗಿದ್ದು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 61,513 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ, ರಾಗಿ ಕಟಾವಿನ ವೇಳೆ ಕಟಾವು ಯಂತ್ರದ ಮಾಲೀಕರು ಇಷ್ಟಬಂದ ದರ ನಿಗದಿಪಡಿಸಿ ಬೆಳೆಗಾರರಿಂದ ಹೆಚ್ಚು ಹಣ ವಸೂಲಿ ಮಾಡುವ ದೂರುಗಳು ಕೇಳಿಬಂದಿವೆ. ಇದು ರೈತರಿಗೆ ಆರ್ಥಿಕ ಹೊರೆಯಾಗಲಿದೆ ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಾಡಿಗೆ ದರ ನಿಗಧಿಮಾಡಲಾಗಿದೆ. ಇದನ್ನು ಉಲ್ಲಂಸಿ ಹೆಚ್ಚಿನ ದರಕ್ಕೆ ಬೇಡಿಕೆ ಇಟ್ಟರೆ ಕಾನೂನು ಕ್ರಮ ಜರುಗಿಸಲಾಗುವುದು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ