ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಾಶದ ಅಂಚಿನಲ್ಲಿರುವ ಶಾಲೆದಾಖಲೆಗಳು.
- ಅಳಿವಿನಂಚಿಗೆ ಶತಮಾನದ ಶಾಲೆಗಳ ದಾಖಲೆಗಳು
ಅಳಿವಿನಂಚಿಗೆ ಶತಮಾನದ ಶಾಲೆಗಳ ದಾಖಲೆಗಳು
ವಿಜಯಪುರ: ಶತಮಾನದ ಇತಿಹಾಸವಿರುವ ಪಟ್ಟಣದ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ವರ್ಗಾವಣೆ ಪತ್ರ (ಟಿಸಿ), ನೋಂದಣಿ ಪುಸ್ತಕ ಹಾಗೂ ಶಾಲಾ ಆಸ್ತಿಪಾಸ್ತಿಗಳ ದಾಖಲಾತಿ ವಿನಾಶದ ಅಂಚಿನಲ್ಲಿವೆ.
ಸರ್ಕಾರದ ಉದಾಸೀನ ಹಾಗೂ ಶಿಕ್ಷಣ ಇಲಾಖೆಯ ರ್ನಿಲಕ್ಷ್ಯ ಮುಂದುವರಿದರೆ ಹಲವು ತಲೆಮಾರುಗಳ ಇತಿಹಾಸವಿರುವ ದಾಖಲೆಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎಚ್ಚರಿಸಿದ್ದು, ಅಧಿಕಾರಿಗಳು ಶ್ರೀವೇ ದಾಖಲಾತಿಗಳನ್ನು ಗಣಕೀಕೃತಗೊಳಿಸಬೇಕು ಎಂದು ಆಗ್ರಹಿಸಿದೆ.
ದಾಖಲೆಗಳು ಪುಡಿಪುಡಿ, ಕಣ್ಣೀರ ಕಥೆ!: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ಪ್ರಾರಂಭಗೊಂಡು ಸುಮಾರು 80 ವರ್ಷಗಳಾಗಿವೆ. ಇಲ್ಲಿನ ಹಳೆಯ ದಾಖಲಾತಿ ಪುಸ್ತಕಗಳನ್ನು ಎಷ್ಟೇ ಮುತುವರ್ಜಿ ವಹಿಸಿ ರಕ್ಷಿಸಿಕೊಂಡು ಬಂದಿದ್ದರೂ, ಕಾಲದ ಹೊಡೆತಕ್ಕೆ ಸಿಲುಕಿ ಬುಕ್ನಲ್ಲಿನ ಹಾಳೆಗಳು ವರ್ಣ ಬದಲಿಸಿಕೊಂಡಿದ್ದು, ಮುಟ್ಟಿದರೆ ಪುಡಿಪುಡಿಯಾಗುತ್ತಿವೆ. ಪ್ರಸ್ತುತ ಶಾಲಾ ಸಿಬ್ಬಂದಿ ಅಂತಹ ಪುಡಿ ಪೇಪರ್ಗಳನ್ನು ಮತ್ತೊಂದು ಹಾಳೆಗೆ ಅಂಟಿಸಿ ಭದ್ರಪಡಿಸುವ ಸಾಹಸ ಮಾಡುತ್ತಿದ್ದಾರೆಯೇ ಹೊರತು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ.
ಪ್ರತಿ ನಾಗರಿಕನ ಅಸ್ತಿತ್ವಕ್ಕೆ ಮತ್ತು ಆತನ ಶೈಕ್ಷಣಿಕ, ಸಾಮಾಜಿಕ ಬದುಕಿಗೆ ಶಾಲಾ ದಾಖಲಾತಿಗಳೇ ಮೂಲ ಆಧಾರ. ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಹೆಸರನ್ನು ಸೇರಿಸಲು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ಶಾಲಾ ದಾಖಲೆಗಳೇ ಅತ್ಯಂತ ಪ್ರಮುಖ ಸಾಕ್ಷಿಯಾಗಿವೆ. ಇಂತಹ ದಶಕಗಳ ಇತಿಹಾಸವಿರುವ ಶಾಲೆಗಳ ದಾಖಲೆಗಳು ನಾಶವಾದರೆ, ಭವಿಷ್ಯದಲ್ಲಿ ಸಾರ್ವಜನಿಕರು ತಮ್ಮ ಅಸ್ತಿತ್ವ ನಿರೂಪಿಸಲು ಕಚೇರಿಗಳಿಗೆ ಅಲೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರೌಢಶಾಲೆ ಪಕ್ಕದಲ್ಲೇ ಇರುವ ಸರ್ಕಾರಿ ಮಾದರಿ ಬಾಲಕರ ಪಾಠಶಾಲೆಗೆ ಬರೋಬ್ಬರಿ 115 ವರ್ಷಗಳ ಇತಿಹಾಸವಿದೆ. ಅಲ್ಲಿನ ಹಳೆಯ ದಾಖಲೆಗಳ ಪರಿಸ್ಥಿತಿಯಂತೂ ಇನ್ನೂ ಕೆಟ್ಟದಾಗಿದೆ. ಇನ್ನು 7-8 ದಶಕಗಳನ್ನು ಕಂಡಿರುವ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಪಾಠಶಾಲೆಯ ದಾಖಲೆಗಳೂ ಸಹ ಇದೇ ರೀತಿ ಹಾಳಾಗುತ್ತಿವೆ.
- ಇಂದಿರಾ ಶಿವಣ್ಣ, ಸಂಸ್ಥಾಪಕರು, ಹಿರಿಯ ವಿದ್ಯಾರ್ಥಿಗಳ ಸಂಘ
ಶಿಕ್ಷಣ ಇಲಾಖೆ ಕಾಯೋರ್ನಮುಖವಾಗಲಿ: ದೇವನಹಳ್ಳಿ ತಾಲೂಕಿನ ಇತಿಹಾಸವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಈ ಎಲ್ಲ ಸರ್ಕಾರಿ ಶಾಲೆಗಳ ಅಮೂಲ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಕಂಪ್ಯೂಟರ್ಗಳಲ್ಲಿ ಸುರಕ್ಷಿತವಾಗಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆಯ ಮೇಲಿದೆ. ಸರ್ಕಾರ ಈ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ, ಶತಮಾನದ ಶಾಲೆಗಳ ದಾಖಲೆಗಳ ಗಣಕೀಕರಣಕ್ಕೆ ಸಮರೋಪಾದಿಯಲ್ಲಿ ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.