ಮುಗಬಾಳ ಗ್ರಾಪಂ ವ್ಯಾಪ್ತಿಯ ನಿಡಗಟ್ಟ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವೇ ಪಡಿತರ ವಿತರಣೆ ಕೇಂದ್ರವಾಗಿ ಬಳಕೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಘಟಕ ದಿನಸಿ ವಿತರಣಾ ಕೇಂದ್ರವಾಗಿ ರೂಪುಪಡೆದಿರುವುದು ಸರ್ಕಾರದ ಯೋಜನೆಯ ಉದ್ದೇಶವನ್ನೇ ಬುಡಮೇಲು ಮಾಡಿರುವ ದೃಶ್ಯ ಕಂಡುಬರುತ್ತಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುದಾನದಡಿ 2021-2 2ನೆ ಸಾಲಿನಲ್ಲಿ ನಿಡಘಟ್ಟ ಗ್ರಾಮದ ಸರ್ವೆ ನಂಬರ್.18ರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡು 4-5 ವರ್ಷಗಳೇ ಕಳೆದರೂ ಈವರೆಗೂ ಯಾವ ಗ್ರಾಮದಿಂದಲೂ ತ್ಯಾಜ್ಯವು ಈ ವಿಲೇವಾರಿ ಘಟಕ ಸೇರುತ್ತಿಲ್ಲ. ಬದಲಿಗೆ ಪಡಿತರ ವಿತರಣೆ ಮಳಿಗೆಯಾಗಿ ಬಳಸಲಾಗುತ್ತಿದೆ.
ಮುಗಬಾಳ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಗ್ರಾಮಗಳಲ್ಲಿ ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ. ಚರಂಡಿಗಳು ಕಟ್ಟಿಕೊಂಡು ಅನೈರ್ಮಲ್ಯ ತಾಂಡವಾಡುತ್ತಿದೆ, ತ್ಯಾಜ್ಯ ವಿಲೇವಾರಿ ಘಟಕವಿದ್ದರೂ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ವಿಪರ್ಯಾಸ. ನೀಡಘಟ್ಟ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯ ಪಡಿತರ ಸಾಮಗ್ರಿ ವಿತರಣೆ ಕೇಂದ್ರವಾಗಿ ಬಳಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ನಿರ್ಮಿಸಿರುವ ಘನ ತ್ಯಾಜ್ಯ ನಿರ್ವಹಣಾ ಕಟ್ಟಡದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಕಾರ್ಯ ನಡೆಯಬೇಕಾಗಿದ್ದರೂ, ಕಟ್ಟಡದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಸರ್ಕಾರದ ಯೋಜನೆಯ ಉದ್ದೇಶವೇ ಹಳ್ಳಹಿಡಿದಿದೆ. ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಿ ನಿರ್ಮಿಸಿರುವ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿರುವುದರಿಂದ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಘನ ತ್ಯಾಜ್ಯ ಕಟ್ಟಡವನ್ನು ಅದರ ಮೂಲ ಉದ್ದೇಶಕ್ಕೇ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರ್ಜಿ ಕೊಡಿ ಪರಿಶೀಲನೆ ಮಾಡ್ತೇನೆ?
ಮುಗುಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಘಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಪಡಿತರ ವಿತರಣೆ ಮಾಡುತ್ತಿರುವ ಬಗ್ಗೆ ಸಾರ್ವನಿಕರು ಅನೇಕ ಬಾರಿ ಹೊಸಕೋಟೆ ತಾಲೂಕು ಇಒ ಮುನಿಯಪ್ಪ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು, ಪೋನ್ ಮೂಲಕ ಹೇಳಿದರೆ ಸಾಲದು ಈ ಬಗ್ಗೆ ಅರ್ಜಿ ಬರೆದು ಲಿಖಿತವಾಗಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಸಾಗಿಹಾಕುತ್ತಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸುವ ಸೌಜನ್ಯ ಪ್ರದರ್ಶಿಸುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆಲವು ತಿಂಗಳ ಹಿಂದೆ ಗ್ರಾಮದ ಡೈರಿ ಕೊಠಡಿಯಲ್ಲಿ ದಿನಸಿ ಕೊಡುತ್ತಿದ್ದರು ಆದರೆ ಊರ ಹೊರಗೆ ಇರುವ ಘನತ್ಯಾಜ್ಯ ವಿಲೇವಾರಿ ಘಟಕದಲಿ ್ಲಅಕ್ಕಿಮೂಟೆಗಳನ್ನು ಸಂಗ್ರಹಿಸಿ ಕೊಡುತ್ತಿದ್ದಾರೆ. ಇದನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ.
ರಾಮಪ್ಪ, ನಿಡಘಟ್ಟ ಗ್ರಾಮ ನಿವಾಸಿ