ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ನಗರದ ಹೃದಯ ಭಾಗದಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ಗುಂಡಿಗಳು ಸ್ವಾಗತಕೋರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇತಿಹಾಸ ಪ್ರಸಿದ್ಧವಾದ ಈ ಬ್ರಹ್ಮರಥೋತ್ಸವ ಫೆ. 3 ರಿಂದ ಪ್ರಾರಂಭಗೊಳ್ಳಲಿದ್ದು, ಈ ಮೂರು ದಿನಗಳ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ರಥಸಂಚಾವಿರುವ ರಾಜಬೀದಿಯಲ್ಲಿನ ಅರೆಬರೆ ಕಾಮಗಾರಿಗಳಿಂದ ರಸ್ತೆಗಳು ಹದಗೆಟ್ಟಿದ್ದು ಉತ್ಸವದ ಸಂಚಾರಕ್ಕೆ ಸಾಕಷ್ಟು ತೊಡಕು ಉಂಟಾಗಲಿದೆ ಎಂಬುದು ಭಕ್ತರ ಬೇಸರಕ್ಕೆ ಕಾರಣಾಗಿದೆ.
ಭೂಗರ್ಭ ಕೇಬಲ್ ಅಳವಡಿಕೆ ಎಡವಟ್ಟು:
ಸಂಚಾರ ದಟ್ಟಣೆ ಇರುವ ರಾಜಬೀದಿಗಳಲ್ಲಿ ಭೂಗರ್ಭ ಕೇಬಲ್ ಅಳವಡಿಕೆ ಕಾಮಗಾರಿ ಕುಂಟುತ್ತಾ ಸಾಗಿರುವುದು ಒಂದೆಡೆಯಾದರೆ ಕಾಮಗಾರಿ ನಡೆದ ಸ್ಥಳಗಳಲ್ಲಿ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚುವ ಕೆಲಸವಾಗದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. ಎಲ್ಲೆಂದರಲ್ಲಿ ಗುಂಡಿಗಳನ್ನು ತೊಡಲಾಗಿದೆ. ರಸ್ತೆ ಬದಿಗಳಲ್ಲಿ ಡಾಂಬರು ಕಿತ್ತು ಹಾಕಿದ್ದು ಮಣ್ಣಿನ ರಾಶಿಯಿಂದ ರಸ್ತೆಯೆಲ್ಲ ಧೂಳುಮಯವಾಗಲಿದೆ ಉತ್ಸವದ ಸಮಯದಲ್ಲಿ ಭಕ್ತರು ಧೂಳಿನ ಮಜ್ಜನ ಅನುಭವಿಸಬೇಕಾಗಿದೆ ಇದಲ್ಲದೆ ಕೇಬಲ್‌ಗಳ ರಾಶಿಗಳನ್ನು ಎಲ್ಲೆಂದರಲ್ಲಿ ಹಾಕಿರುವುದರಿಂದ ರಸ್ತೆಯೂ ಕಿರಿದಾಗಿದ್ದು ಸಾಮಾನ್ಯ ದಿನಗಳಲ್ಲೇ ವಾಹನ ದಟ್ಟಣೆ ಏರ್ಪಡುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಈ ಕೇಬಲ್ ಬಂಡಲ್‌ಗಳು ಆಪಾಯ ತಂದೊಡ್ಡಬಹುದು ಎಂಬ ಆತಂಕವೂ ಎದುರಾಗಿದೆ.
ಫೆ.3 ರ ಒಳಗಾಗಿ ನಗರದಲ್ಲಿರುವ ಭೂಗರ್ಭ ಕೇಬಲ್‌ಗಳನ್ನು ಅಳವಡಿಸಿರುವ ಪ್ರದೇಶಗಳಲ್ಲಿ ಗುಂಡಿಗಳ್ಳನ್ನಾದರೂ ಮುಚ್ಚಲು ಅಧಿಕಾರಿಗಳು ಮುಂದಾಗಬೇಕು. ದೇವನಹಳ್ಳಿಯಲ್ಲಿ ದೊಡ್ಡಮಟ್ಟದಲ್ಲಿ ಜರುಗುವ ವೇಣುಗೋಪಾಲಸ್ವಾಮಿ ರಥೋತ್ಸವವ ಸುಗಮವಾಗಿ ಸಾಗಲು ಸೇರುವ ಸಾವಿರಾರು ಭಕ್ತರು ಉತ್ಸವ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಬೇಕು.
ಕೇಬಲ್ ಅಳವಡಿಕೆ ಕಾಮಗಾರಿ ನೆಪದಲ್ಲಿ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಕಾಮಗಾರಿಯೂ ಆಮೆವೇಗದಲ್ಲಿ ಸಾಗಿದೆ ಕೆಲವು ಕಡೆಗಳಲ್ಲಿ ಕಾಮಗಾರಿಯೇ ನಿಂತುಹೋಗಿದೆ. ಕೇಬಲ್ ಅಳವಡಿಸಿದ ಜಾಗದಲ್ಲಿ ತಾತ್ಕಾಲಿಕವಾಗಿ ಕೆಲವು ಕಡೆಗಳಲ್ಲಿ ಮಣ್ಣು ಮುಚ್ಚಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಆ ಕೆಲಸವನ್ನೂ ಮಾಡಿಲ್ಲ ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಸತೀಶ್‌ಕುಮಾರ್, ಚನ್ನರಾಯಪಟ್ಟಣ