rain effect 
ಬೆಂಗಳೂರು ಗ್ರಾಮಾಂತರ

ಸ್ಥಳೀಯಾಡಳಿತಗಳ ನಿರ್ಲಕ್ಷ್ಯ ಬಿಚ್ಚಿಟ್ಟ ಮಳೆರಾಯ

ಶಿವರಾಜ.ಎಂ
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಪ್ರತೀ ಮಳೆಗಾಲ ಆರಂಭಕ್ಕೂ ಮುನ್ನಾ ಮುಂಜಾಗ್ರತಾ ಕ್ರಮವಹಿಸಬೇಕಾದ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ಧೋರಣೆ ಈ ಮುಂಗಾರಿನಲ್ಲೂ ಬಯಲಾಗಿದೆ.
ಹೌದು! ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳು ಸಣ್ಣ ಮಳೆಗೂ ಜಲಾವೃತಗೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ತೆರೆದ ಚರಂಡಿ, ರಾಜಕಾಲುವೆಗಳ ನೀರು ಉಕ್ಕಿ ಹರಿದು ರಸ್ತೆಗಳು ಜಲಾವೃತಗೊಳ್ಳುವ ಮೂಲಕ ಅಧಿಕಾರಿಗಳು ಗಾಡನಿದ್ರೆಯಲ್ಲಿರುವ ಸತ್ಯವನ್ನು ಬಯಲು ಮಾಡುತ್ತಿದೆ. ಸೋಮವಾರ ಸುರಿದ ಸಣ್ಣ ಮಳೆಗೆ ಹೊಸಕೋಟೆ ನಗರ ಜಲಾವೃತಗೊಂಡಿರುವುದೇ ಇದಕ್ಕೆ ಸಾಕ್ಷಿ. ಬೋರ್ಗರೆದು ಹರಿದ ರಾಜಕಾಲುವೆ ನೀರು ರಸ್ತೆಗಳಿಗೆ ನುಗ್ಗಿ ವಾಹನ ಸವಾರರು ಪರದಾಡಿದ ಸನ್ನಿವೇಶ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯವೇ ಮುಖ್ಯ ಕಾರಣ:
ಜಿಲ್ಲೆಯ ನಾಲ್ಕೂ ತಾಲೂಕುಗಳ ನಗರ ಪಟ್ಟಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದಕ್ಕೆ ಮುಖ್ಯಕಾರಣ ಪ್ಲಾಸ್ಟಿಕ್ ತ್ಯಾಜ್ಯ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ನಗರಸಭೆ, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಜತೆಗೆ ಸಾರ್ವಜನಿಕರ ಅಸಹಕಾರದ ಲವಾಗಿ ಮೋರಿಗಳು, ಒಳಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಹೊಸಕೋಟೆಯಲ್ಲಿ ಈ ಪ್ರಮಾಣದ ಹೆಚ್ಚಾಗಿಯೇ ಇದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು, ಚರಂಡಿ ರಾಜಕಾಲುವೆಗಳಿಗೆ ಕಸ ತೂರುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಳೆಗಾಲಕ್ಕೂ ಮುನ್ನ ಎಚ್ಚೆತ್ತುಕೊಂಡಿಲ್ಲ:
ಬೇಸಿಗೆ ಕಳೆಯುತ್ತಿದ್ದಂತೆ ಆರಂಭವಾಗುವ ಮುಂಗಾರಿಗೆ ಮುಂಚೆಯೇ ಸ್ಥಳೀಯ ಆಡಳಿತಗಳು ಚರಂಡಿ, ರಾಜಕಾಲುವೆಗಳ ಸ್ವಚ್ಛತೆ ಪೂರ್ಣಗೊಳಿಸಬೇಕು, ಒಳಚರಂಡಿಗಳು, ರಸ್ತೆಗಳ ಮೂಲಕ ಚರಂಡಿಗೆ ಹರಿಯುವ ಜಾಗಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಆದರೆ ಪ್ರತೀ ವರ್ಷದಂತೆ ಈ ವರ್ಷಕ್ಕೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ, ಇದರಿಂದಾಗಿ ಸ್ಥಳೀಯ ಆಡಳಿತಗಳೂ ನಿದ್ರೆಯಿಂದ ಮೇಲೆದ್ದಿಲ್ಲ. ಪರಿಣಾಮವಾಗಿ ಸಣ್ಣ ಮಳೆಗೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ.
ಅರೆ ಕಾಮಗಾರಿಗಳ ಲ:
ಇನ್ನೂ ಅಭಿವೃದ್ದಿ ನೆಪದಲ್ಲಿ ನಡೆಯುತ್ತಿರುವ ಕಾಮಗಾರಿಗಳೂ ಆಮೆಗತಿಯಲ್ಲಿ ಸಾಗುತ್ತಿರುವುದು ಪ್ರಮುಖ ಕಾರಣಗಳಲ್ಲೊಂದಾಗಿದೆ. ರಸ್ತೆ, ಚರಂಡಿ ಕಾಮಗಾರಿಗಳು ಅಪೂರ್ಣಗೊಂಡಿರುವುದು, ಕೆಲವು ಕಾಮಗಾರಿಗಳಿಗೆ ರಸ್ತೆ ಅಗೆದು ಹಾಗೆ ಬಿಟ್ಟಿರುವುದು ಇಂಥ ಅವಾಂತರಗಳಿಗೆ ಕಾರಣವಾಗುತ್ತಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗಗಳಲ್ಲಿ ಕೆಲವು ಕಡೆಗಳಲ್ಲಿ ಅರ್ಧ ತಾಸು ಮಳೆಯಾಗಿದ್ದರೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮುಂಗಾರು ಆರಂಭದಲ್ಲೇ ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯಾಡಳಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಜಿಲ್ಲೆಯ ಹಲವಡೆ ಸುರಿದ ಮಳೆ
ಹೊಸಕೋಟೆ ತಾಲೂಕಿನಾದ್ಯಂತ ಸೋಮವಾರ ಸಂಜೆ 6 ಗಂಟೆ ಸುವಾರಿಗೆ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ, ಮಳೆಯಿಂದ ಬೀದಿ ವ್ಯಾಪಾರಿಗಳು ವಾಹನ ಸವಾರರು ಪರದಾಡುವಂತಾಯಿತು. ರಸ್ತೆಗಳಲ್ಲಿ ಮೊಣಕಾಲಿನವರೆಗೆ ನೀರು ಹರಿಯುತ್ತಿದ್ದು ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುವಂತಾಯಿತು. ಮೋರಿಗಳಲ್ಲಿ ಕಸ ಸಿಲುಕಿ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ಹರಿಯುವ ಮೂಲಕ ಸಂಚಾರಸಿಕ್ಕಿಗೆ ಕಾರಣವಾಯಿತು.