rain 
ಬೆಂಗಳೂರು ಗ್ರಾಮಾಂತರ

ಮಳೆಗಾಗಿ ಮಳೆರಾಯನ ಮೊರೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹುಯ್ಯೋ.. ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ...ಬಾರೋ ಬಾರೋ ಮಳೆರಾಯ ಬಾಳೆತೋಟಕ್ಕೆ ನೀರಿಲ್ಲ... ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಈ ರೀತಿಯಾಗಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಗ್ರಾಮಸ್ಥರು ಮಳೆರಾಯನ ಮೊರೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಎಲ್-ನಿನೋ ಪರಿಣಾಮವಾಗಿ ಗ್ರಾಮಾಂತರ ಜಿಲ್ಲೆಯಲ್ಲಿಯೂ ಮಳೆರಾಯ ಮುನಿಸಿಕೊಂಡಿದ್ದು ಬಿತ್ತನೆಗಾಗಿ ಎದುರು ನೋಡುತ್ತಿರುವ ರೈತರು ಕಂಗಾಲಾಗಿದ್ದಾರೆ. ಜುಲೈ ಅಂತ್ಯದೊಳಗಾದರೂ ಮಳೆರಾಯ ಕೃಪೆ ತೋರಿ ಭೂಮಿಗೆ ತಂಪೆರೆಯುತ್ತಾನೆ ಎಂದು ಕಾಯುತ್ತಿರುವ ರೈತರು ಅನಾದಿಕಾಲದಿಂದಲೂ ಪ್ರಚಲಿತದಲ್ಲಿರುವ ‘ಮಳೆರಾಯನ’ ಪ್ರಾರ್ಥನೆ ಮಾಡುತ್ತಿದ್ದಾರೆ. ಇದೊಂದು ಗ್ರಾಮೀಣ ಭಾಗದಲ್ಲಿ ಅಚಲವಾದ ನಂಬಿಕೆಯಾಗಿದ್ದು, ಯಾವ ವರ್ಷದಲ್ಲಿ ನಿರೀಕ್ಷಿತ ಮಳೆಯಾಗದಿದ್ದರೆ ಮಳೆರಾಯ ಮುನಿಸಿಕೊಂಡಿದ್ದಾನೆ ಎಂದು ನಂಬುವ ಗ್ರಾಮೀಣ ಜನರು ಮಳೆರಾಯನ ಮಾಡಿ ಅತನ ಮುನಿಸನ್ನು ತಣಿಸುವ ಪ್ರಯತ್ನ ಮಾಡುತ್ತಾರೆ. ಈ ರೀತಿ ಮಾಡಿದರೆ ಮಳೆರಾಯ ಮುನಿಸು ತೊರೆದು ಕರುಣೆ ತೋರುತ್ತಾನೆ ಎಂಬುದು ಗ್ರಾಮೀಣ ಜನರ ಅಚಲ ನಂಬಿಕೆಯಾಗಿದೆ. ತಮಟೆ ಸದ್ದಿನೊಂದಿಗೆ ಹುಯ್ಯೋ..ಹುಯ್ಯೋ ಮಳೆರಾಯ ಎಂಬ ಜಾನಪದ ಗೀತೆಯನ್ನು ಹಾಡುತ್ತಾ ಗ್ರಾಮಸ್ಥರು ಮೆರವಣಿಗೆ ನಡೆಸುತ್ತಾರೆ. ಇದೊಂದು ರೀತಿ ವೈಜ್ಞಾನಿಕವಾಗಿಯೂ ನೀರಿನ ಮಹತ್ವವನ್ನು ಸಾರುತ್ತದೆ.
ಮಣ್ಣಿನ ಬೊಂಬೆಗೆ ಪೂಜೆ:
ಗ್ರಾಮಸ್ಥರೆಲ್ಲ ಸೇರಿ ಸಂಪ್ರದಾಯಬದ್ಧವಾಗಿ ಮಳೆರಾಯನ ಮಣ್ಣಿನ ಮೂರ್ತಿ ತಯಾರು ಮಾಡುತ್ತಾರೆ. ಮಳೆರಾಯನಿಗೆ ಹೂ ಹಣ್ಣುಗಳಿಂದ ಸಿಂಗರಿಸಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಾಗುತ್ತದೆ. ಮಳೆರಾಯನ ಮಣ್ಣು ಬೊಂಬೆಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ರೀತಿ ಮೆರವಣಿಗೆ ವೇಳೆ ಪ್ರತಿ ಮನೆಗಳ ಮುಂದೆ ಬರುವ ಮಳೆರಾಯನಿಗೆ ಮನೆಗಳವರು ಪೂಜೆ ಸಲ್ಲಿಸುತ್ತಾರೆ. ಮಳೆರಾಯನ ಬೊಂಬೆ ಹೊತ್ತವನ ಮೇಲೆ ನೀರು ಸುರಿಯಾಗುತ್ತದೆ. ಈ ರೀತಿ ಮೆರವಣಿಗೆಯುದ್ದಕ್ಕೂ ನಡೆಯುತ್ತದೆ. ಬಳಿಕ ಕೆರೆಕಟ್ಟೆ ಅಥವಾ ಇನ್ನಿತರ ಜಲಮೂಲಗಳ ಬಳಿ ಮಳೆರಾಯನ ಬೊಂಬೆಯನ್ನು ಮುಳುಗಿಸುವ ಮೂಲಕ ಹರಕೆ ತೀರಿಸಲಾಗುತ್ತದೆ.
ಮಳೆರಾಯನ ಮಾಡುವುದು ಈ ಹಿಂದಿನಿಂದಲೂ ನಡೆದುಬಂದಿರುವ ಪದ್ಧತಿಯಾಗಿದೆ. ಮುನಿಸಿಕೊಂಡಿರುವ ಮಳೆರಾಯನನ್ನು ಸಂತೈಸಲು ಈ ರೀತಿಯ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಇದು ಗ್ರಾಮೀಣ ಭಾಗದಲ್ಲಿನ ಜನರ ಅಚಲ ನಂಬಿಕೆಯಾಗಿದೆ. ಕಾಕತಾಳಿಯವೋ ಅಥವಾ ಈ ನಂಬಿಕೆ ನಿಜವೋ ಒಟ್ಟಿನಲ್ಲಿ ಅನೇಕ ವೇಳೆ ಈ ರೀತಿ ಮಾಡಿದ ಬಳಿಕ ಉತ್ತಮ ಮಳೆಯಾದ ಉದಾಹರಣೆಗಳಿವೆ. ಒಟ್ಟಿನಲ್ಲಿ ಮಳೆರಾಯ ನಾಡಿನ ಮೇಲೆ ಕೃಪೆ ತೋರಬೇಕು ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ.
ಪೋಡಿಗಪ್ಪ, ದೊಡ್ಡಹೆಜ್ಜಾಗಿ ಗ್ರಾಮಸ್ಥ
--
ಇವತ್ತೋ ನಾಳೆಯೋ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಭೂಮಿ ಹದ ಮಾಡಿಕೊಂಡು ಕಾಯುತ್ತಿದ್ದೇವೆ. ಆಗಸ್ಟ್ ಮೊದಲ ವಾರವಾದರೂ ಮಳೆರಾಯ ಕರುಣೆ ತೋರಿದರೆ ಬಿತ್ತನೆ ಕಾರ್ಯ ಅರಂಭಿಸಬಹುದು ಎಂಬ ಆಶಾಭಾವವಿದೆ. ಮೋಡ ಕಟ್ಟುತ್ತಿದೆ ಇನ್ನೇನು ಮಳೆ ಬರಬಹುದು ಎನ್ನುವಷ್ಟರಲ್ಲಿ ಮೋಡಗಳು ಚದುರಿಹೋಗುತ್ತಿವೆ. ಮಳೆರಾಯನ ಮಾಡಿದ ಬಳಿಕವಾದರೂ ಮುನಿಸು ತೊರೆದು ಕೃಪೆ ತೋರಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.
ರಾಮನಾಥ್, ದೊಡ್ಡಬೆಳವಂಗಲ