ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಅವಧಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಸುಮಾರು 6 ಹೆಕ್ಟೇರ್‌ನಷ್ಟು ದ್ರಾಕ್ಷಿಗೆ ಬೆಳೆಗೆ ಹಾನಿಯಾಗಿದೆ, ಅದೃಷ್ಟವಶಾತ್ ಮಾವಿನ ಬೆಳೆಗೆ ಹಾನಿಯಾಗಿಲ್ಲ. ಉತ್ತಮ ಸಲಿನ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಕಳೆದೊಂದು ವಾರದಲ್ಲಿ ವಾಡಿಕೆ ಮಳೆಗಿಂತ ಶೇ.232 ರಷ್ಟು ಮಳೆಯಾಗಿದೆ, ವಾಡಿಕೆ 3.7 ಮಿ.ಮೀ ಮಳೆ ಬದಲಿಗೆ 29.2 ಮಿ.ಮೀ ಮಳೆಯಾಗಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿದ್ದು, ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 5871 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 70 ಸಾವಿರ ಮೆಟ್ರಿಕ್ ಟನ್ ಇಳುವರಿ ಬರುತ್ತಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಯ ಪರಿಣಾಮವಾಗಿ ಬಾಳೆ ಇಳುವರಿಗು ಕುತ್ತು ತಂದಿದೆ, ಜೋರು ಗಾಳಿಗೆ ಬಾಳೆ ಗಿಡಗಳು ನೆಲಕಚ್ಚಿವೆ ಹಾಗೆಯೇ ದ್ರಾಕ್ಷಿ ತೋಟಗಳಲ್ಲಿ ಹಾನಿ ಕಂಡುಬಂದಿದೆ. ಮಾವು ಬೆಳೆ ಮೇಲೆ ದುಷ್ಪರಿಣಾಮ ಬೀರಿಲ್ಲ. ಬದಲಿಗೆ ಮಳೆಯಿಂದಾಗಿ ಉತ್ತಮ ಗಾತ್ರದ ಗುಣಮಟ್ಟದ ಸಲು ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಜಿಲ್ಲೆಯೆಲ್ಲೆಡೆ ಒಣಹವೆಯಿತ್ತು. ಆದರೆ ಇತ್ತೀಚಿಗೆ ಮಳೆ ಸುರಿದು ತಾಪಮಾನ ಸುಧಾರಿಸಿತ್ತು.ಹಲವೆಡೆ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು ಹವಾಮಾನ ಇಲಾಖೆ ಗ್ರಾಮಾಂತರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ೋಷಿಸಿದೆ. ತುಂತುರು ಮಳೆ ಜತೆಗೆ ಒಣಹವೆ ಮುಂದುವರೆಯಲಿದೆ ಮುಂದಿನ ದಿನಗಳಲ್ಲೂ ಆಲಿಕಲ್ಲು ಸಹಿತ ಮಳೆಸುರಿವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದೆ.
ಜಿಲ್ಲಾ ತೋಟಗಾರಿಕೆ ಇಲಾಖೆಯ ಜಾಗೃತ ಕಾರ್ಯಕ್ರಮಗಳಿಂದ ಜಿಲ್ಲೆಯ ಬಹುಪಾಲು ಮಾವು ಹಾಗೂ ದ್ರಾಕ್ಷಿ ಬೆಳೆಗಾರರು ವಿಮೆ ಮಾಡಿಸಿದ್ದು, ಆಲಿಕಲ್ಲು ಮಳೆಗೆ ಬೆಳೆ ಹಾನಿಯಾಗಿರುವುದಕ್ಕೆ ವಿಮೆ ನೆರವು ಸಿಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿ ಆರ್ಥಿಕ ನೆರವು ಪಡೆಯುವಂತೆ ಮನವಿ ಮಾಡಿದ್ದಾರೆ.
ಧರೆಗುರುಳಿದ ಮರ, ವಿದ್ಯುತ್‌ಕಂಬ:
ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಮುಂಗಾರು ಪೂರ್ವ ಮಳೆಗೆ ಮರಗಳು ಧರೆಗುರುಳಿವೆ, ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹಲವಡೆ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದ್ದು, ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಕಂಡುಬಂದಿದೆ. ದೊಡ್ಡಬಳ್ಳಾಪುರದಲ್ಲಿ ಪಾಲಿಹೌಸ್‌ವೊಂದು ಧರೆಶಾಹಿಯಾಗಿದೆ. ಇದೇ ತಾಲೂಕಿನಲ್ಲಿ ಬೃಹತ್ ಛಾವಣಿ ರಸ್ತೆಗೆ ಹಾರಿಬಿದ್ದಿದೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಉಳಿದಂತೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ, ಅದೃಷ್ಟವಶಾತ್ ಮಾವಿನ ಬೆಳೆಗೆ ಹಾನಿಯಾಗಿಲ್ಲ. ಆಲಿಕಲ್ಲು ಮಳೆ ಬಿದ್ದರೆ ತೊಂದರೆ ಎದುರಾಗುತ್ತದೆ ಇಲ್ಲವಾದರೆ ಈ ಮಳೆ ಮಾವಿಗೆ ಪೂರಕವಾಗಿದ್ದು ಉತ್ತಮ ಇಳುವರಿಗೆ ಸಹಕಾರಿಯಾಗುತ್ತದೆ. ಮಾವು ಹಾಗೂ ದ್ರಾಕ್ಷಿ ಹಾನಿಯಾಗಿದ್ದರೆ ವಿಮೆ ನೆರವು ಪಡೆಯಬಹುದು.
ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ