ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಗೆಜ್ಜಗದಹಳ್ಳಿ ಬಳಿಯ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 190 ಟನ್ ಯೂರಿಯಾ ರಸಗೊಬ್ಬರವನ್ನು ಡಿಆರ್‌ಐ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ತಜೀರ್ ಖಾನ್ ಯೂಸುಫ್ ಎಂಬವರು ತಿಂಗಳಿಗೆ 40 ಸಾವಿರ ರೂ.ಬಾಡಿಗೆಗೆ ಗೋದಾಮು ಪಡೆದಿದ್ದರು. ಇದೇ ಗೋದಾಮಿನಿಂದ ಯೂರಿಯಾ ಪ್ಯಾಕ್ ಮಾಡಿ ತಮಿಳುನಾಡಿಗೆ ರಫ್ತು ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ದಾಳಿ ನಡೆಸಿದ್ದ ಡಿಆರ್‌ಐ ಅಧಿಕಾರಿಗಳಿಗೆ ಬೆಂಗಳೂರಿನಿಂದ ರಪ್ತಾಗುತ್ತಿರುವ ಮಾಹಿತಿ ಸಿಕ್ಕಿತ್ತು.
ಕೆಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದ 45 ಕೆಜಿ ತೂಕದ ಯೂರಿಯಾವನ್ನು ಗೋದಾಮಿನಲ್ಲಿ ದಾಸ್ತಾನು ಮಾಡಿ, ಅದೇ ಗೊಬ್ಬರವನ್ನು ಬೇರೆ ಚೀಲಗಳಿಗೆ ತುಂಬಿ 50 ಕೆಜಿ ಚೀಲವನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಕೇವಲ 266 ರೂ.ಗೆ ರೈತರಿಗೆ ನೀಡಬೇಕಿದ್ದ ಯೂರಿಯಾವನ್ನು 2 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಿಎಂ ಸಬ್ಸಿಡಿ ಯೂರಿಯಾವನ್ನು ರಾಜ್ಯದ ಕೃಷಿ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತದೆ, ಅದನ್ನು ಕೃಷಿ ಇಲಾಖೆ ಮೂಲಕ ರೈತರಿಗೆ ಮಾರಾಟ ಮಾಡಬೇಕು. ಆದರೆ, ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ ನಡೆದಿದೆ ಎನ್ನಲಾಗಿದೆ. ಡಿಆರ್‌ಐ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಗೋದಾಮಿಗೆ ಬೀಗ ಹಾಕಿದ್ದಾರೆ.
ಕೇಂದ್ರ ಸರ್ಕಾರ ಸಬ್ಸಿಡಿ ಮೂಲಕ ರೈತರ ಅನುಕೂಲಕ್ಕಾಗಿ ಯೂರಿಯಾ ಸುಲಭವಾಗಿ ಸಿಗಲಿ ಎಂದು ಕಡಿಮೆ ದರ ನಿಗಧಿಪಡಿಸಿದೆ. ಆದರೆ, ಹಣದಾಸೆಗಾಗಿ ಅನ್ಯ ರಾಜ್ಯಗಳಿಗೆ ಆಕ್ರಮವಾಗಿ ಮಾರಾಟ ಮಾಡಿ ರಾಜ್ಯದ ರೈತರಿಗೆ ವಂಚಿಸಲಾಗುತ್ತಿದೆ. ಎಷ್ಟು ವರ್ಷದಿಂದ ಎಷ್ಟು ಮೂಟೆ ಯೂರಿಯಾ ಆಕ್ರಮವಾಗಿ ಸಾಗಾಣಿಕೆ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.