raagi-registration 
ಬೆಂಗಳೂರು ಗ್ರಾಮಾಂತರ

3.50 ಲಕ್ಷ ಕ್ವಿಂಟಾಲ್ ರಾಗಿ ನೋಂದಣಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾತರ
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಆರಂಭವಾಗಿದ್ದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಡಿ.15 ಹೆಸರು ನೋಂದಣಿಗೆ ಕಡೆ ದಿನವಾಗಿದ್ದು ಇದುವರೆಗೆ 3.50 ಕ್ವಿಂಟಾಲ್ ರಾಗಿ ನೋಂದಣಿಯಾಗಿದೆ.
ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ಜಿಲ್ಲೆಯಲ್ಲಿ ಒಟ್ಟು 62026 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಾಗಿದೆ. ವರ್ಷದಿಂದ ವರ್ಷಕ್ಕೆ ರಾಗಿ ಬೆಳೆಯ ವಿಸ್ತೀರ್ಣ ಹೆಚ್ಚುತ್ತಿದ್ದು, ರಾಗಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುತ್ತಿರುವುದು ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯ ರೈತರಿಗೆ ವರದಾನವಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚಳ:
ರಾಗಿ ಬೆಂಬಲ ಬೆಲೆ ದರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2022 -23ರ ಸಾಲಿನಲ್ಲಿ ಪ್ರತಿ ಕ್ವಿಂಟಲ್ ರಾಗಿಗೆ 3578 ರೂ.ನಿಗಧಿಪಡಿಸಲಾಗಿತ್ತು. 2023-24ರಲ್ಲಿ 3846 ಹೆಚ್ಚಿಸಲಾಯಿತು. 2024- 25ರಲ್ಲಿ 4290 ರೂಪಾಯಿ ಇತ್ತು, 2025- 26ರಲ್ಲಿ 4886 ರೂ. ನಿಗಧಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ಹೆಚ್ಚು ಉತ್ಸುಕತೆ ತೋರಿಸುತ್ತಿದ್ದಾರೆ.
5 ಕಡೆಗಳಲ್ಲಿ ಖರೀದಿ ಕೇಂದ್ರ:
ಜಿಲ್ಲೆಯಲ್ಲಿ 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿಗೆ ಡಿ. 15 ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ 5 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ನೆಲಮಂಗಲ ತಾಲೂಕಿನಲ್ಲಿ ಕುಣಿಗಲ್ ರಸ್ತೆಯಲ್ಲಿನ ಕೆಎ್ಸಿಎಸ್‌ಸಿ ಗೋದಾಮು,ತ್ಯಾಮಗೊಂಡ್ಲು ಹೋಬಳಿಯಲ್ಲಿ ವಿಎಸ್‌ಎಸ್‌ಎನ್ ಕಳಲುಘಟ್ಟ ರೈತ ಕೇಂದ್ರ, ಸೋಂಪುರ ಹೋಬಳಿಯಲ್ಲಿ ವಿಎಸ್‌ಎಸ್‌ಎನ್ ರೈತ ಕೇಂದ್ರ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎಪಿಎಂಸಿ ಯಾರ್ಡ್ ಹಾಗೂ ಸಾಸಲು ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರ, ದೇವನಹಳ್ಳಿ ತಾಲೂಕಿನಲ್ಲಿ ಕುರುಬರದೊಡ್ಡಿಯಲ್ಲಿನ ಕೆಎ್ಸಿಎಸ್‌ಸಿ ಗೋದಾಮು, ಹೊಸಕೋಟೆ ತಾಲೂಕಿನಲ್ಲಿ ವೀರಭದ್ರೇಶ್ವರ ಮಿಲ್‌ನಲ್ಲಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಿದ್ದವು.
ಅಗತ್ಯ ದಾಖಲೆಗಳೊಂದಿಗೆ ನೋಂದಣಿ:
ಈಗಾಗಲೇ ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನೋಂದಣಿ ಪ್ರಾರಂಭಿಸಲಾಗಿರುತ್ತದೆ, ಡಿ.15 ಕಡೆಯ ದಿನವಾಗಿದ್ದು ಇದುವರೆಗೆ 3.50 ಲಕ್ಷ ಟನ್ ರಾಗಿ ನೋಂದಣಿಯಾಗಿದೆ. ಸರ್ಕಾರದ ಆದೇಶದಂತೆ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೀಲಗಿರಿ ಜಾಗದಲ್ಲಿ ರಾಗಿ:
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವರ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ನೀಲಗಿರಿಗಳ ತೆರವು ಆಂದೋಲನ ನಡೆದಿತ್ತು. ಆ ವೇಳೆ ಸ್ವಯಂಪ್ರೇರಿತರಾಗಿ ರೈತರು ನೀಲಗಿರಿ ತೆರವಿಗೆ ಮುಂದಾಗಿದ್ದರು. ಆ ವೇಳೆ ಹೆಕ್ಟೇರ್‌ಗಟ್ಟಲೆ ನೀಲಗಿರಿ ತೆರವುಗೊಂಡು ಆ ಜಮೀನುಗಳಲ್ಲಿ ರಾಗಿ ಬೆಳೆಯಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಗಿ ಬೆಳೆಯ ವಿಸ್ತೀರ್ಣ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಹೋಬಳಿಗೊಂದು ರಾಗಿ ಕೇಂದ್ರ:
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ ರೈತರು ಹೆಚ್ಚು ಒಲವು ತೋರಿಸುತ್ತಿರುವುದರಿಂದ ಮುಂದಿನ ಸಾಲಿನಿಂದ ಹೋಬಳಿಗೊಂದರಂತೆ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಪ್ರಸ್ತುತ ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ ಐದು ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೂರದ ಊರುಗಳಿಂದ ರಾಗಿ ತಂದು ಕೇಂದ್ರಗಳಿಗೆ ತಲುಪಿಸುವುದು ರೈತರಿಗೆ ಹೊರೆಯಾಗುತ್ತಿದೆ. ಆದ್ದರಿಂದ ರೈತರ ಹಿತದೃಷ್ಟಿ ಕಾಪಾಡಲು ರಾಗಿ ಖರೀದಿ ಕೇಂದ್ರಗಳನ್ನು ಹೆಚ್ಚಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ತಾಲೂಕುವಾರು ರಾಗಿ ಬೆಳೆ ವಿಸ್ತೀರ್ಣ
ದೇವನಹಳ್ಳಿ 11697 ಹೆಕ್ಟೇರ್
ಹೊಸಕೋಟೆ 9249 ಹೆಕ್ಟೇರ್
ದೊಡ್ಡಬಳ್ಳಾಪುರ 23995ಹೆಕ್ಟೇರ್
ನೆಲಮಂಗಲ 17085ಹೆಕ್ಟೇರ್
ಒಟ್ಟು 62026ಹೆಕ್ಟೇರ್