ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇಶದಲ್ಲಿ ಪೊಲಿಯೋ ನಿರ್ಮೂಲನೆಯಾಗಿದ್ದರೂ, ನೆರೆಹೊರೆ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ವೈರಸ್ ವಿರುದ್ಧ ಹೋರಾಡಲು ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲೂ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೊಲಿಯೋ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು.ಪಾಲಕರು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಬೂತ್‌ಗಳಲ್ಲಿ ಲಸಿಕೆ ಹಾಕಿಸಲು ಸಾಧ್ಯವಾಗದಿದ್ದರೆ ಮನೆಗಳಿಗೆ ಭೇಟಿ ನೀಡಿದಾಗ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು. ಕಾರಾಣಾಂತರಗಳಿಂದ ಮಕ್ಕಳಿಗೆ ಬೂತ್‌ಗಳಲ್ಲಿ ಲಸಿಕೆ ಹಾಕಿಸಲು ಸಾಧ್ಯವಾಗದಿದ್ದರೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಬಂದಾಗ ಕಡ್ಡಾಯವಾಗಿ ಹನಿ ಹಾಕಿಸಬೇಕು. ಹಿಂದೆ ಎಷ್ಟೇ ಬಾರಿ ಲಸಿಕೆ ಕೊಡಿಸಿದ್ದರೂ, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಕೊಡಿಸಬೇಕು ಎಂದು ಹೇಳಿದರು. ಮಕ್ಕಳ ಭವಿಷ್ಯ ಸುರಕ್ಷಿತವಾಗಿರಬೇಕು ಎಂಬ ದೂರದೃಷ್ಟಿಯಿಂದ ಲಸಿಕೆ ನೀಡಲಾಗುತ್ತಿದೆ. ದೇಶವನ್ನು ಪೊಲಿಯೋ ಮುಕ್ತ ದೇಶ ಎಂದು ಘೋಷಿಸಲಾಗಿದೆ. ಆದರೂ ಬೇರೆ ದೇಶದ ಭಾಗಗಳಲ್ಲಿ ಇಂದಿಗೂ ಸಮಸ್ಯೆ ಇದೆ. ನಮ್ಮ ದೇಶದಲ್ಲಿ ಮತ್ತೆ ಸಮಸ್ಯೆ ಬರಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು. ಜುಲೈ 1 ರವರೆಗೆ ಅಂದರೆ 5 ದಿನಗಳ ಕಾಲ ಅಭಿಯಾನ ನಡೆಯಲಿದ್ದು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ 1,00,434 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 479 ಬೂತ್‌ಗಳಲ್ಲಿ 2046 ಲಸಿಕಾದಾರರು ಈ ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.