Puja for various works 
ಬೆಂಗಳೂರು ಗ್ರಾಮಾಂತರ

ವಾರದೊಳಗೆ ಸಹಜ ಸ್ಥಿತಿ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸಮಸ್ಯೆ ವಾರದೊಳಗೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಜನರು ಮನೆಗಳಲ್ಲಿ ಅಡುಗೆ ಅನಿಲ ಬಳಕೆಯಲ್ಲಿ ಮಿತಿವ್ಯಯ ಮಾಡುವಲ್ಲಿ ಸಹಕರಿಸಬೇಕು. ಗ್ಯಾಸ್ ಪೂರೈಕೆದಾರರು ಕಾಳಸಂತೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಮಾರಾಟ ಮಾಡಬಾರದು. ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಕೊಲ್ಲಿ ದೇಶಗಳ ಯುದ್ಧದ ಸಮಯದಲ್ಲಿ ಅನಗತ್ಯವಾಗಿ ಸಿಲಿಂಡರ್ ಪೂರೈಕೆ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ. ವಾರದಲ್ಲಿ ಎಲ್ಲ ಗೊಂದಲ ಬಗೆಹರಿಯಲಿದೆ ಎಂದರು.
ಆದ್ಯತೆ ಮೇರೆಗೆ ವಿತರಣೆ:
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಶೇ. 20 ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆ, ಶಾಲಾ, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ನಿಲ್ದಾಣಗಳ ಕ್ಯಾಂಟಿನ್‌ಗಳಿಗೆ ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಚೇರಿಗಳಲ್ಲಿ, ವೃದ್ದಾಶ್ರಮ,ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಆದ್ಯತೆ ಮೇರೆಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ವಿತರಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಕರಣ ದಾಖಲು:
ಗೃಹಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದು ಅದರಂತೆ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209 ಶಿವಮೊಗ್ಗ ಜಿಲ್ಲೆಯಲ್ಲಿ 3 ,ಯಾದಗಿರಿ ಜಿಲ್ಲೆಯಲ್ಲಿ 46 ದಾವಣಗರೆ 13 , ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ವಶಪಡಿಸಿಕೊಳ್ಳಲಾಗಿದೆ ಹಾಗೆಯೇ ಕೋಲಾರ ಜಿಲ್ಲೆಯ ಕೆಜಿಎ್ನಲ್ಲಿ ಅಕ್ರಮ ರೀಪಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾಮಗಾರಿಗಳಿಗೆ ಗುದ್ದಲಿಪೂಜೆ:
ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ- 44 ರಿಂದ ಅರದೇಶನಹಳ್ಳಿ ಸೇರುವ ರಸ್ತೆಯ ಮಾರ್ಗ ಕನ್ನಮಂಗಲ, ಪೂಜನಹಳ್ಳಿ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚದ 3.60 ಕೋಟಿ ರೂ.
ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ-207 ರಿಂದ ಕೊಂಡೇನಹಳ್ಳಿ ಗೇಟ್ (ರಾಜ್ಯ ಹೆದ್ದಾರಿ-104) ಸೇರುವ ರಸ್ತೆಯ ಮಾರ್ಗ ಗಂಗವಾರ-ಚೌಡಪ್ಪನಹಳ್ಳಿ, ಕಗ್ಗಲಹಳ್ಳಿ ರಸ್ತೆಯ 2.55 ಕಿ.ಮೀ ಮತ್ತು 1 ಕಿ.ಮೀ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚ 4.90 ಕೋಟಿ ರೂ. ಕಾಮಗಾರಿಯ ಭೂಮಿ ಪೂಜೆ, ವಿಜಯಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೆಸ್ಕಾಂ ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಹಳೆಯ 11 ಕೆ.ವಿ ಮೇಲ್ತಂತಿ ತೆಗೆದು ಭೂಗತ ವಿದ್ಯುತ್ ಕೇಬಲ್ (ಯುಜಿಡಿ) ಅಳವಡಿಕೆ ಕಾಮಗಾರಿ ಮತ್ತು ಪಿಡಬ್ಲ್ಯೂಡಿ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರು.