ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರಕ್ಕೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ದೇವನಹಳ್ಳಿ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ವಿರುದ್ಧ ೋಷಣೆ ಕೂಗಿದ್ದರು. ಮಂಗಳವಾರ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರು ಧರಣಿಯನ್ನು ಮುಂದುವರೆಸಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಸ ಪ್ರಯೋಗಿಸಿದರು. ಬಿಜೆಪಿ ಎಸ್‌ಸಿ ಮೋರ್ಚಾ, ಯುವಮೋರ್ಚಾ, ಮಹಿಳಾ ಮೋರ್ಚಾ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡು ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ೋಷಣೆ ಕೂಗಿದರು ಸರ್ಕಾರ ವಜಾ ಆದೇಶ ಪ್ರಕಟಿಸುವವರೆಗೆ ಧರಣಿ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಹಣ ಕಲೆಕ್ಷನ್‌ಗೆ ಸಚಿವ ಪಟ್ಟ:
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ, ಸರ್ಕಾರ ಕೆಲವು ಸಚಿವರನ್ನು ಬಸ್‌ನ ನಿರ್ವಾಹಕರಂತೆ ಬಳಸಿಕೊಳ್ಳುತ್ತಿದೆ, ಚಾಲಕ ಬಸ್ ಚಾಲನೆ ಮಾಡಿದರೆ ನಿರ್ವಾಹಕ ಹಣ ಕಲೆಕ್ಷನ್ ಮಾಡುತ್ತಾನೆ. ಅದನ್ನು ಮಂಡಳಿಗೆ ತಲುಪಿಸುತ್ತಾನೆ. ಅದೇ ರೀತಿ ಸರ್ಕಾರ ಸಚಿವ ನಾಗೇಂದ್ರ ಅವರನ್ನು ಬಳಕೆ ಮಾಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಹೈಕಮಾಂಡ್ ಸೇರಿ ಪ್ರಮುಖ ಕಾಂಗ್ರೆಸ್ಸಿಗರಿಗೆ ಪಂಡ್ ಹೊಂದಿಸಲು ನಾಗೇಂದ್ರ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಆದ್ದರಿಂದ ಅವರ ಮೇಲೆ ಪ್ರಕರಣವಿದ್ದರೂ ಸಚಿವ ಸ್ಥಾನ ನೀಡಲಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರು ಗ್ರಾಮಾಂತ ಜಿಲ್ಲಾ ವ್ಯಾಪ್ತಿಯಲ್ಲಿ ರೈತ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದೆ ಎಂದು ರಾಮಕೃಷ್ಣಯ್ಯ ಆರೋಪಿಸಿದರು. ಅಭಿವೃದ್ಧಿ ನೆಪದಲ್ಲಿ ಲವತ್ತಾದ ಕೃಷಿಭೂಮಿಯನ್ನ ಕಬಳಿಸಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಆಸಕ್ತಿ ತೋರಿಸುತ್ತಿದೆ. ಇಂಥ ಸರ್ಕಾರದಿಂದ ರೈತಾಪಿ ಜನರು ಬೀದಿಗೆ ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಕ್ರಮ ನಿವೇಶನಗಳಿಗೆ ಖಾತಾ ನೀಡುವ ಮೂಲಕ ಹೇಗಾದರೂ ಸರಿ ಸರ್ಕಾರದ ಬೊಕ್ಕಸ ಭರ್ತಿ ಮಾಡಲು ಮುಂದಾಗಿದೆ. ಇದರಿಂದ ಅನೇಕ ಅವ್ಯಹಾರಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಮಾಜಿ ಶಾಸಕ ನಾಗರಾಜ್ ದೂರಿದರು. ಕಾರು ನಿಲುಗಡೆಗೂ ಶುಲ್ಕ ಹಾಕಲು ಮುಂದಾಗಿರುವ ಸರ್ಕಾರ ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡುವ ಜನರಿಗೂ ಶುಲ್ಕ ವಿಧಿಸಿದರೆ ಅಶ್ಚರ್ಯಪಡುವಂತಿಲ್ಲ. ಸಚಿವ ಸಂಪುಟದಲ್ಲಿ ಕಳಂಕಿತರಿಗೂ ಸ್ಥಾನ ಕೊಡುವ ಮೂಲಕ ಎಲ್ಲ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ದೂರಿದರು, ಸಚಿವ ನಾಗೇಂದ್ರ ರಾಜೀನಾಮೆ ನೀಡುವ ತನಕ ಬಿಜೆಪಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿನ ಪರಿಶಿಷ್ಟ ಜಾತಿ ಪರಿಶಿಷ್ಟವರ್ಗ ಪಂಗಡದಲ್ಲಿನ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ,
ಅನುಮತಿ ಇಲ್ಲದ ವಿವಿಧ ಖಾಸಗಿ ಬ್ಯಾಂಕ್ ಖಾತೆಗಳಿಗೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ವರ್ಗವಣೆ ಸಂಪೂರ್ಣ ತನಿಖೆಯಾಗಬೇಕು ಎಂದು ಬಿಜೆಪಿ ಮುಖಂಡರ ಸಪ್ತಗಿರಿ ಶಂಕರ್‌ನಾಯಕ್ ಒತ್ತಾಯಿಸಿದರು.