protest 
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್‌ನಿಂದ ಬಡ, ಮಧ್ಯಮವರ್ಗದ ಹಣ ಲೂಟಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪಾರದರ್ಶಕ ಆಡಳಿತ ಮತ್ತು ಗ್ಯಾರಂಟಿ ಯೋಜನೆಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್ ಆರೋಪಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನ ಆವರಣದಲ್ಲಿ ಸೋಮವಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದುರುಪಯೋಗದ ಆರೋಪಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿನ ಪರಿಶಿಷ್ಟ ಜಾತಿ ಪರಿಶಿಷ್ಟವರ್ಗ ಪಂಗಡದಲ್ಲಿನ ಕಲ್ಯಾಣಕ್ಕಾಗಿ ಸಚಿವ ಸಂಪುಟದಲ್ಲಿ ಮೀಸಲಿಟ್ಟಿದ್ದ ಅನುದಾನವನ್ನು ತೆಲಂಗಾಣ ವಿಧಾನಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ, ಮದ್ಯ ಹಾಗೂ ಐಷಾರಾಮಿ ಕಾರುಗಳ ಖರೀದಿಗೆ ದುರ್ಬಳಕೆಯಾಗಿದೆ ಎಂದು ದೂರಿದರು.
ಅನಿರ್ದಿಷ್ಟಾವಧಿ ಹೋರಾಟ:
ನಿಗಮದ ಖಾತೆಯಿಂದ ಸುಮಾರು 88 ಕೋಟಿ ರೂಪಾಯಿ 94 ಕೋಟಿ ರೂ.ಹಣವನ್ನು ನಕಲಿ ಹಾಗೂ ಅನುಮತಿ ಇಲ್ಲದ ವಿವಿಧ ಖಾಸಗಿ ಬ್ಯಾಂಕ್ ಖಾತೆಗಳಿಗೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿರುವುದು ಖಂಡನೀಯ. ಅಂದು ಆಂದ್ರ ಪ್ರದೇಶದಲ್ಲಿ ನಡೆಯುವ ಚುನಾವಣೆಗೆ ಈ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ, ರಾಜೀನಾಮೆ ನೀಡುವ ತನಕ ಬಿಜೆಪಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಯಲಿದೆ ಎಂದು ಸಂಸದರು ಹೇಳಿದರು. ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ವರ್ಗವಣೆ ಸಂಪೂರ್ಣ ತನಿಕೆಯಾಗಬೇಕು. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತ ವಿನಿಯೋಗಿಸುತ್ತಿರುವುದರಿಂದ, ಶಾಸಕರ ಕ್ಷೇತ್ರಾಭಿವೃದ್ಧಿ ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅನುದಾನದ ಅಭಾವ ಎದುರಾಗಿದೆ. ಬೆಲೆ ಏರಿಕೆ ಹಾಗೂ ತೆರಿಗೆ ಹೆಚ್ಚಳ ಮಾಡಿ ಖಜಾನೆ ಭರ್ತಿ ಮಾಡಲು ಸರ್ಕಾರ ಇಂಧನ ಮೇಲಿನ ವ್ಯಾಟ್ ಆಸ್ತಿ ನೋಂದಣಿ ಶುಲ್ಕ ಮತ್ತು ಹಾಲಿನ ದರ ಸೇರಿ ವಿವಿಧ ಸೇವಾ ದರಗಳನ್ನು ಹೆಚ್ಚಿಸಿದೆ ಇದು ಖಂಡನೀಯ ಎಂದರು. ದೇವನಹಳ್ಳಿ ಹೊಸಕೋಟೆ, ನೆಲಮಂಗಲ ದೊಡ್ಡಬಳ್ಳಾಪುರ ನಾಲ್ಕು ತಾಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಹೋರಾಟ ನಡೆಯಲಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.