ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಿಗೆ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಆಂಜಿನಪ್ಪ ಮನವಿ ಮಾಡಿದರು.
ದೇವನಹಳ್ಳಿ ಜಿಲ್ಲಾಡಳಿತಭವನದಲ್ಲಿ ಜಿಪಂ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆ, ಹಾಲು ಸೇರಿ ಆಹಾರ ಪದಾರ್ಥಗಳ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅನುದಾನದ ಕೊರತೆ ಎದುರಾಗಿದೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ 8 ರಿಂದ 9 ರೂಪಾಯಿ ಏರಿಕೆ ಕಂಡಿದೆ. ಆದರೆ ಸರ್ಕಾರದಿಂದ ಪ್ರತಿ ಮೊಟ್ಟೆಗೆ 5 ರೂಪಾಯಿ ಮಾತ್ರ ನೀಡಲಾಗುತ್ತಿದೆ, ಉಳಿದ ಹಣವನ್ನು ಶಿಕ್ಷಕರು ಸ್ವಂತ ಹಣದಿಂದ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಕುಕ್ಕುಟೋದ್ಯಮ ನಿಗದಿಪಡಿಸುವ ದೈನಂದಿನ ಮೊಟ್ಟೆಯ ದರವನ್ನು ಆಧರಿಸಿ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಸ್ಪಷ್ಟ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವುದು ಕಷ್ಟವಾಗಲಿದೆ ಎಂದರು. ಅಕ್ಷರ ದಾಸೋಹದ ಬೇಳೆ ಹಾಗೂ ಎಣ್ಣೆಯನ್ನು ಶಾಲೆಗಳಿಗೆ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ತಕ್ಷಣವೇ ಬೇಳೆ ಮತ್ತು ಎಣ್ಣೆಯನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆದರ್ಶ್ ಕುಮಾರ್ ಮಾತನಾಡಿ, ಮೊಟ್ಟೆ ವಿತರಣೆಯಲ್ಲಿ ಮುಖ್ಯ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಗ್ಯಾಸ್, ಸಕ್ಕರೆ ಸಮಸ್ಯೆ ಇದೆ. ಮೊಟ್ಟೆ ದರ ಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟಗೊಳಿಸುತ್ತದೆ. ಅದರಂತೆ,ಮುಖ್ಯ ಶಿಕ್ಷಕರು ಖಾತೆಗೆ ಅನುದಾನವನ್ನು ಜಮೆ ಮಾಡಿದರೆ ಅನುಕೂಲವಾಗುತ್ತದೆ. ಮಕ್ಕಳಿಗೆ ನೀಡಲಾಗುತ್ತಿರುವ ಹಾಲಿಗೆ ಸಕ್ಕರೆ ಖರೀದಿಸಲು ನೀಡುತ್ತಿರುವ ಅನುದಾನವೂ ಸಾಕಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಮೊಟ್ಟೆ ದರ ಪರಿಷ್ಕರಣೆ ಮಾಡಬೇಕು. ಶಿಕ್ಷಕರು ಕೈಯಿಂದ ಹಣವನ್ನು ಹಾಕಿ ಮೊಟ್ಟೆಯನ್ನು ತರುತ್ತಿದ್ದಾರೆ. ಪ್ರತಿ ಮಕ್ಕಳಿಗೂ ಪೌಷ್ಟಿಕಾಂಶ ಆಹಾರ ನೀಡುವ ಉದ್ದೇಶದಿಂದ ಮೊಟ್ಟೆ ನೀಡುತ್ತಿದ್ದೇವೆ ಈ ಬಗ್ಗೆ ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ದೇವನಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯತೀಶ್‌ಕುಮಾರ್ ಒತ್ತಾಯಿಸಿದರು. ಯಾವಾಗಲು ಮೊಟ್ಟೆ ದರ ಕುಸಿಯುವುದಿಲ್ಲ. ಮೊಟ್ಟೆ ದರ ಕುಸಿಯುವುದು ತೀರ ಅಪರೂಪವಾಗಿದೆ ಆದರೆ ಪ್ರತಿನಿತ್ಯ ದರ ಏರಿಕೆಯಾಗುತ್ತಲೇ ಇರುತ್ತದೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಜಿಲ್ಲಾ ಆಡಳಿತದ ಜವಾಬ್ದಾರಿಯಾಗಿದೆ. ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ಭರವಸೆ ನೀಡಿದರು.