ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಮ್ಮೂರ ಸರ್ಕಾರಿ ಶಾಲೆ, ನಮ್ಮೂರಲ್ಲೇ ಇರಲಿ ಅವುಗಳನ್ನು ವಿಲೀನಗೊಳಿಸುವುದು ಬೇಡ ಎಂದು ದೇವನಹಳ್ಳಿ ತಾಲೂಕಿನ ವಿವಿಧ ಗ್ರಾಮದ ಗ್ರಾಮಸ್ಥರು ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವಿಶ್ವನಾಥಪುರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಬೇಡ, ವಿಶ್ವನಾಥಪುರ ಕೆಪಿಎಸ್‌ಮ್ಯಾಗ್ನೆಟ್ ಶಾಲೆಗೆ ಸೋಲೂರು, ದಿನ್ನೆಸೋಲೂರು ಮತ್ತು ಬ್ಯಾಡರಹಳ್ಳಿ ಮತ್ತಿತರ ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಯೋಜನೆ ಸರಿಯಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಈ ಕೂಡಲೇ ಈ ಯೋಜನೆಯನ್ನು ಕೈ ಬಿಟ್ಟು ಎಲ್ಲ ಹಳ್ಳಿಯ ಶಾಲೆಗಳು ಹಳ್ಳಿಗಳಲ್ಲೇ ಉಳಿಯಬೇಕೆಂದು ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪಾಲಕರು, ಗ್ರಾಮಸ್ಥರು ಹಾಗೂ ಎಐಡಿಎಸ್‌ಒ ಬಿಇಒ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬಡ ವಿದ್ಯಾರ್ಥಿಗಳ ಶಿಕ್ಷಕಕ್ಕೆ ಕೊಕ್ಕೆ:
ರಾಜ್ಯದ್ಯಂತ 40 ಸಾವಿರಕ್ಕೂ ಹೆಚ್ಚು ಶಾಲೆಯನ್ನು ನುಂಗುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ಅಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕೆಪಿಎಸ್‌ಯೋಜನೆಯ ಹೆಸರಿನಲ್ಲಿ ಹಳ್ಳಿ ಶಾಲೆಗಳನ್ನು ಮುಚ್ಚಿ ದೊಡ್ಡ ಸಂಖ್ಯೆಯ ಬಡವಿದ್ಯಾರ್ಥಿಗಳನ್ನು, ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ ಎಂದುಎಐಡಿಎಸ್‌ಒನ ಬೆಂಗಳೂರು ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯ ನವಾಜ್ ಆರೋಪಿಸಿದರು. ಮಕ್ಕಳ ಬೆಳವಣಿಗೆ ಚೆನ್ನಾಗಿರಬೇಕಾದರೆ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಅದೇ ಹಳ್ಳಿಯ ಶಾಲೆಯಲ್ಲಿ ಕಲಿಯಬೇಕು. ಈಗಿರುವಾಗ ಈ ಯೋಜನೆಯನ್ನು ತಕ್ಷಣವೇ ಕೈ ಬಿಟ್ಟು ಎಲ್ಲ ಹಳ್ಳಿಯ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಖಾಯಂ ಶಿಕ್ಷಕರನ್ನು ಕೊಟ್ಟು ಶಿಕ್ಷಣದ ಗುಣಮಟ್ಟವನ್ನು ್ಲ ಹೆಚ್ಚಿಸುವತ್ತ ಸರ್ಕಾರ ಮೊದಲು ಗಮನ ನೀಡಬೇಖು ಎಂದು ಅಗ್ರಹಿಸಿದರು.
ಮಕ್ಕಳನ್ನು ದೂರ ಕಳುಹಿಸುವುದಿಲ್ಲ:
ಕೆಪಿಎಸ್‌ಮ್ಯಾಗ್ನೆಟ್ ಯೋಜನೆಯ ಅಡಿಯಲ್ಲಿ ಪಂಚಾಯಿತಿಗೆ ಒಂದು ಶಾಲೆ ಮಾಡುವುದನ್ನು ನಾವು ಯಾವುದೇ ರೀತಿ ಒಪ್ಪುವುದಿಲ್ಲ ಎಂದು ಸೋಲೂರು ಗ್ರಾಮದ ಮುಖಂಡ ಚಿಕ್ಕೇಗೌಡ ಹೇಳಿದರು ನಾಲ್ಕೈದು ಕಿ.ಮೀ ದೂರದಲ್ಲಿರುವ ಕೆಪಿಎಸ್ ಶಾಲೆಗೆ ನಮ್ಮ ಮಕ್ಕಳನ್ನು ಕಳುಹಿಸುವುದು ಸಾಧ್ಯವಿಲ್ಲ. ನಮ್ಮ ಊರಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಭಯ ಇದೆ , ನಮ್ಮ ಊರಿನಿಂದ ವಿಶ್ವನಾಥಪುರ ಹೈಸ್ಕೂಲ್ಗೆ ಹೋಗುವಾಗ ಅನೇಕ ಮಕ್ಕಳು ಅಪಘಾತಕ್ಕೆ ತುತ್ತಾಗಿರುವ ಘಟನೆಗಳು ನಮ್ಮ ಕಣ್ಣಮುಂದಿದೆ. ಹೀಗಿರುವ ಸನ್ನಿವೇಶದಲ್ಲಿ ಯಾವುದೇ ಪಾಲಕರು ಮಕ್ಕಳನ್ನು ಅಷ್ಟೂ ದೂರ ಕಳುಹಿಸಲು ಒಪ್ಪುವುದಿಲ್ಲ ಎಂದು ಹೇಳಿದರು. ಆದ್ದರಿಂದ ನಮ್ಮೂರ ಶಾಲೆ ಮುಚ್ಚುವುದನ್ನು ಕೈ ಬಿಟ್ಟು ನಮ್ಮೂರಿನ ಶಾಲೆಗೆ ಖಾಯಂ ಶಿಕ್ಷಕರು ಕೊಡುವುದರ ಮೂಲಕ ನಮ್ಮೂರ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವತ್ತ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.