protest 
ಬೆಂಗಳೂರು ಗ್ರಾಮಾಂತರ

ಸರ್ಕಾರಕ್ಕೆ ಭೂಮಿ ಬಿಡುವುದಿಲ್ಲ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಸ್ಥಳೀಯ ರೈತರು ಆರಂಭಿಸಿರುವ ಆಹೋರಾತ್ರಿ ಧರಣಿ ತೀವ್ರ ಪ್ರತಿಭಟನೆಯ ಸ್ವರೂಪ ತಳೆದಿದ್ದು, ಮೇ 21 ರಂದು ದೊಡ್ಡಬೆಳವಂಗಲ ಧರಣಿ ಸ್ಥಳದಿಂದ ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ನಡೆಸಲು ಹೋರಾಟಗಾರರು ಸಜ್ಜಾಗಿದ್ದಾರೆ.
ನಮ್ಮ ಭೂಮಿ ನಮ್ಮ ಹಕ್ಕು, ರೈತರ ಗೋಳು ಕಾಡಲಿದೆ ಎಲ್ಲರ ಒಡಲು ಎಂಬ ೋಷವಾಕ್ಯದೊಂದಿಗೆ ಟ್ರ್ಯಾಕ್ಟರ್ ರ‌್ಯಾಲಿಗೆ ಅಂತಿಮ ಸಿದ್ದತೆ ನಡೆದಿದೆ. ಕಳೆದ ಮೂರು ದಿನಗಳಿಂದ ಭೂಸ್ವಾಧೀನಗೊಳ್ಳಲಿರುವ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಗ್ರಾಮದಲ್ಲಿ ರೈತ ಮುಖಂಡರು ದೊಡ್ಡಮಟ್ಟದ ಪ್ರಚಾರ ಕಾರ್ಯ ನಡೆಸಿದ್ದು ರೈತರಲ್ಲಿ ಒಗ್ಗಟ್ಟಿನ ಮಂತ್ರಬೀಜ ಬಿತ್ತುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಲವಂತದ ಭೂಸ್ವಾಧೀನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ರಾತ್ರಿ ವೇಳೆ ಡ್ರೋನ್‌ಗಳ ಹಾರಾಟ:
ಯಾವ ರೈತರನ್ನೂ ಸಂಪರ್ಕಿಸದೆ ಯಾರ ಅನುಮತಿಯನ್ನೂ ಪಡೆಯದೇ ಜಮೀನುಗಳ ರಹಸ್ಯವಾಗಿ ಜಮೀನುಗಳ ನಕ್ಷೆ ತಯಾರಿಸುವ ಪ್ರಯತ್ನ ನಡೆಯುತ್ತಿದೆ. ರಾತ್ರಿ ವೇಳೆ ಜಮೀನುಗಳ ಮೇಲೆ ಡ್ರೋನ್‌ಗಳನ್ನು ಹಾರಾಡಿಸಿ ರೈತರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ರೈತರ ಪ್ರತಿರೋಧವನ್ನು ಲೆಕ್ಕಿಸದೆ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ತಿಂಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಈ ಕಡೆ ತಲೆಹಾಕುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ. ಆದ್ದರಿಂದ ಮಲಗಿರುವ ಆಡಳಿತ ಯಂತ್ರವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ದೊಡ್ಡಬೆಳವಂಗಲ ಭೂಸ್ವಾಧೀನ ಹೋರಾಟ ಸಮಿತಿ ಮುಖಂಡ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಡಿಸಿಗೆ ಮನವಿ:
ಈಗಾಗಲೇ ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ನಡೆಸಲು ಅನುಮತಿ ಕೋರಿ ಹಾಗೂ ಈ ಪ್ರತಿಭಟನೆ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿ ಜಿಲ್ಲಾಧಿಕಾರಿ ಡಾ.ಕೆ,ಎನ್.ಅನುರಾಧಾ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಭೂಸ್ವಾಧೀನದ ಆತಂಕ ಎದುರಿಸುತ್ತಿರುವ ಗ್ರಾಮಗಳ ರೈತರು ಸ್ವತಃ ಟ್ರ್ಯಾಕ್ಟರ್‌ಗಳನ್ನು ತರುತ್ತಿದ್ದು ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸಿದ್ದಾರೆ. ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ರೈತ ಸಂಘಟನೆಗಳು ಸಾಥ್ ನೀಡಿದ್ದು ಗುರುವಾರ ಟ್ರ್ಯಾಕ್ಟರ್ ರ‌್ಯಾಲಿಯ ಮೂಲಕ ಸರ್ಕಾರಕ್ಕೆ ಚುರುಕು ಮುಟ್ಟಿರುವ ಪ್ರಯತ್ನಕ್ಕೆ ಅನ್ನದಾತರು ಮುಂದಾಗಿದ್ದಾರೆ.
ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿನ ಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತಾಪಿ ಜನರ ನಿದ್ರೆಗೆಡಿಸಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಮಡುಗಟ್ಟುತ್ತಿದೆ. ದೇವನಹಳ್ಳಿ ಡಿಸಿ ಕಚೇರಿ ಎದುರು ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನಕ್ಕೆ ಸಜ್ಜಾಗುತ್ತಿದ್ದೇವೆ. ಈ ಹೋರಾಟಕ್ಕೆ ನಾಡಿನ ಹಲವು ಸಂಘಟನೆಗಳು ಕೈಜೋಡಿಸಲಿವೆ.
ರಾಮಕೃಷ್ಣಯ್ಯ, ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ