ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತ್ತೀಚೆಗೆ ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಕರಡಿಗುಡ್ಡ ಅತಿಯಾದ ಕೆಲಸದ ಒತ್ತಡ, ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಜೀವನ ನಡೆಸಲು ಸಾಧ್ಯವಾಗದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಡೀ ರಾಜ್ಯದ ಪಿಡಿಒ ಸಮುದಾಯವನ್ನು ತೀವ್ರ ಆಘಾತಕ್ಕೀಡುಮಾಡಿದೆ ಇದೇ ರೀತಿ ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಹಾದಿ ಹಿಡಿಯುವಂತಾಗಬಾರದು ಎಂದು ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಪಿಡಿಒಗಳ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ದೇವನಹಳ್ಳಿ ಜಿಲ್ಲಾಡಳಿತಭವನದ ಆವರಣದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಪಿಡಿಒಗಳ ಮೇಲಿನ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆ ವಿಳಂಬ ಹಾಗೂ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ರಾಜ್ಯದ ಎಲ್ಲ ಪಿಡಿಒಗಳ ಸೇವಾ ರಕ್ಷಣೆಗೆ ಸರ್ಕಾರ ಕ್ರಮವಹಿಸಬೇಕು ಎಂದು ಅಗ್ರಹಿಸಿದರು.
ಮಾನಸಿಕ ಯಾತನೆ ಅನುಭವಿಸಿದ್ದರು:
ಹಿಂದೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತುಗೊಂಡು, ಕಳೆದ 9 ತಿಂಗಳುಗಳಿಂದ ಅವರಿಗೆ ಯಾವುದೇ ವೇತನವಾಗಿರಲಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ವೇತನವಿಲ್ಲದೆ ಸಂಸಾರ ಸಾಗಿಸಲು ಕಷ್ಟವಾಗಿ, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳ ಭವಿಷ್ಯದ ಚಿಂತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಪಿಡಿಒ ಎಷ್ಟೊಂದು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ದಿಲೀಪ್‌ಕುಮಾರ್ ಬೇಸರ ವ್ಯಕ್ತಪಡಿಸಿದರು. ಈ ಪ್ರಕರಣ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿ ಆಧಾರ ಸ್ತಂಭವಾಗಿರುವ ಪಿಡಿಒಗಳು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದ ಅವರು, ದಾಖಲೆ ರಹಿತ ವರದಿಗಳ ಆಧಾರದ ಮೇಲೆ ಬರುವ ದೂರುಗಳನ್ನು ತನಿಖೆ ಮಾಡುವುದು, ಇಲಾಖಾ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ 50 ಕ್ಕೂ ಹೆಚ್ಚು ಪಿಡಿಒಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಇದೊಂದು ದುರಾದೃಷ್ಟಕರ ಘಟನೆಯಾಗಿದ್ದು ನಮ್ಮ ಗ್ರಾಮಾಂತರ ಜಿಲ್ಲೆಯಲ್ಲಿ ಇಂತಹ ಒತ್ತಡಗಳಲ್ಲಿ ಕೆಲಸ ಮಾಡುತ್ತಿರುವ ಪಿಡಿಒಗಳ ಮಾನಸಿಕ ಸ್ಥಿಗತಿಗಳನ್ನು ಗಮನಿಸಿ ಸಿಇಒ ಜತೆ ಚರ್ಚಿಸಿ ಇಂತಹ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೆವೆ ಎಂದು ಮನವಿ ಸ್ವೀಕರಿಸಿದ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಭರವಸೆ ನೀಡಿದರು.