Prohibition Officers 
ಬೆಂಗಳೂರು ಗ್ರಾಮಾಂತರ

ಅಕ್ಷಯ ತೃತೀಯಾ ಮೇಲೆ ಕಣ್ಗಾವಲು

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಅಕ್ಷಯ ತೃತೀಯಾ ದಿನವಾದ ಏ.20ರಂದು ರಾಜ್ಯದ ಹಲವಡೆ ಬಾಲ್ಯವಿವಾಹ ಪ್ರಕರಣಗಳು ಜರುಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ನಿಯೋಜಿಸಿ ಪ್ರಕರಣಗಳನ್ನು ತಡೆಯುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.
ಗ್ರಾಮ, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟದವರೆಗೆ ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ನಿಯೋಜಿಸಿದ್ದು, ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹೈ ಅಲರ್ಟ್ ಆಗಿರುವಂತೆ ಸೂಚಿಸಿದೆ. ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಾಮೂಹಿಕ ವಿವಾಹಗಳ ಮೇಲೆ ಕಣ್ಣಿಡುವಂತೆ ತಾಕೀತು ಮಾಡಿದೆ. ಅಕ್ಷಯ ತೃತೀಯ ದಿನದಂದು ಕಲ್ಯಾಣ ಮಂಟಪಗಳು, ದೇವಸ್ಥಾನಗಳಲ್ಲಿ ನಡೆಯುವ ವಿವಾಹಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುವುದರ ಜತೆಗೆ ಅಧಿಕಾರಿಗಳು ಖುದ್ಧು ಹಾಜರಾಗಿ ಪರಿಶೀಲನೆ ನಡೆಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ತಾಯಂದಿರ ಮರಣ, ಶಿಶು ಮರಣ, ಅಪೌಷ್ಟಿಕತೆ, ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ದುಷ್ಪರಿಣಾಮಗಳಿಗೆ ನೇರ ಕಾರಣವಾಗಲಿರುವ ಬಾಲ್ಯವಿವಾಹವೆಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಸಲುವಾಗಿ ಸತತ ಹೋರಾಟ ನಡೆಸುತ್ತಿರುವ ಸರ್ಕಾರ ಅಕ್ಷಯ ತೃತೀಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ಜತೆಗೆ ಶಾಲೆಗಳಿಗೆ ಬೇಸಿಗೆ ರಜೆ ಇರುವುದು ಮತ್ತೊಂದು ಕಾರಣವಾಗಿದ್ದು, ಇಂಥ ಸಂದರ್ಭಗಳಲ್ಲಿ ಪಾಲಕರು ಬಾಲ್ಯವಿವಾಹದಂತ ಕೃತ್ಯಕ್ಕೆ ಕೈಹಾಕುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಂದಾಜಿಸಿದೆ.
ಕಠಿಣ ಜೈಲು ಶಿಕ್ಷೆ:
ಬಾಲ್ಯವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುಟುಂಬ ವರ್ಗವನ್ನೂ ತಪ್ಪಿತಸ್ಥರು ಎಂದು ಕಾಯ್ದೆಯಡಿ ಕೇಸ್ ದಾಖಲಿಸಲಾಗುವುದು, ಕಾಯ್ದೆಯ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷ ಕಾಲ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವರೆಡರನ್ನು ಅನ್ವಯಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಚಿಸಿದೆ.
ಇಲಾಖೆಗಳ ಕಣ್ಗಾವಲು:
ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ತಾಕೀತು ಮಾಡಿದೆ. ಈಗಾಗಲೇ ಅಧಿಕೃತವಾಗಿ ನೋಂದಣಿಯಾಗಿರುವ ಸಾಮೂಹಿಕ ವಿವಾಹಗಳ ಬಗ್ಗೆ ವರದಿ ಪಡೆದು ಇಲಾಖೆ ಪರಿಶೀಲನೆ ನಡೆಸಿದೆ. ಇನ್ನು ಅಧಿಕೃತವಾಗಿ ನೋಂದಣಿ ಮಾಡದೆ ದೇಗುಲಗಳಲ್ಲಿ ದಿಢೀರ್ ಸಾಮೂಹಿಕ ವಿವಾಹ ಏರ್ಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಮುಖ ದೇಗುಲಗಳ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದೆ.
ಶಾಲೆ ಬಿಟ್ಟ ಮಕ್ಕಳ ಮಾಹಿತಿ:
ಕಳೆದೆರಡು ವರ್ಷದಿಂದ ನಾನಾ ಕಾರಣಕ್ಕೆ ಶಾಲೆ ಬಿಟ್ಟ ಮಕ್ಕಳು ಬಾಲ್ಯವಿವಾಹದ ಸಂಕೋಲೆಗೆ ಸಿಲುಕುವ ಅಪಾಯವಿರುತ್ತದೆ ಎಂಬುದು ಜಿಲ್ಲಾಡಳಿತದ ಲೆಕ್ಕಚಾರವಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಮಕ್ಕಳ ವಿವರ ಕಲೆ ಹಾಕುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಆಯಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಾಲೆ ಬಿಟ್ಟ ಮಕ್ಕಳ ವಿವರ ಕಲೆ ಹಾಕಲಾಗುತ್ತಿದೆ, ಈ ಸಂದರ್ಭದಲ್ಲಿ ಇಂಥ ಮಕ್ಕಳ ಮದುವೆಗೆ ಸಿದ್ದತೆ ನಡೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
18-21 ರೊಗಳಗಿನ ಮದುವೆ:
18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಲಾಗುವುದು. ಈ ಕಾಯ್ದೆಯಡಿ ಪ್ರತಿ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿರುತ್ತದೆ.
ಅಕ್ಷಯ ತೃತೀಯ ದಿನದಂದು ಬಾಲ್ಯವಿವಾಹಗಳು ನಡೆಯಲಿವೆ ಎಂಬ ಶಂಕೆ ಹಿನ್ನಲೆಯಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನಿಯೋಜಿಸಿದ್ದು, ಧಾರ್ಮಿಕ ಕ್ಷೇತ್ರಗಳು, ಕಲ್ಯಾಣ ಮಂಟಪ ಸೇರಿ ವಿವಾಹಗಳು ನಡೆಯುವ ಸ್ಥಳಗಳಿಗೆ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪ್ರಮುಖ ದೇಗುಲಗಳ ಮುಖ್ಯಸ್ಥರಿಗೆ ಸುತ್ತೋಲೆ ನೀಡಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಿಯಾದರೂ ಇಂಥ ಪ್ರಕರಣ ನಡೆಯುವ ಸಾಧ್ಯತೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಅನಿತಾಲಕ್ಷ್ಮೀ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಬೆಂ.ಗ್ರಾಮಾಂತರ