progress-review-meeting 
ಬೆಂಗಳೂರು ಗ್ರಾಮಾಂತರ

ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಸದ್ಬಳಕೆ ಆಗಬೇಕು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಅನುದಾನ ಒದಗಿಸಲಿದ್ದು ಆ ಹಣವು ಸಂಪೂರ್ಣವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಸಮರ್ಪಕವಾಗಿ ಸದ್ಬಳಕೆ ಆಗಬೇಕು ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಸೂಚಿಸಿದರು.
ದೇವನಹಳ್ಳಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಪುರಸಭೆ, ನಗರಸಭೆ ಶೇ.24.5 ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೇ.25 ಹಣ ಪರಿಶಿಷ್ಟರಿಗೆ ಮೀಸಲಿಡಲಾಗುತ್ತದೆ. ಆ ಹಣ ದುರುಪಯೋಗ ಪಡಿಸಿಕೊಳ್ಳುವುದು ಅಥವಾ ಇತರೆ ಕೆಲಸಗಳಿಗೆ ಅನುದಾನ ಬಳಕೆ ಮಾಡುವುದು ಅಪರಾಧ. ಅಂತಹ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯಾವುದೇ ವ್ಯಕ್ತಿ ಅಥವಾ ಸಮುದಾಯ,ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದರೆ ಆಯೋಗವು ತಕ್ಷಣ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಈ ಸಂಬಂಧವಾಗಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು ಎಂದರು.
ಮುಂದಿನ ಕ್ರಮ:
ಪ್ರಮುಖವಾಗಿ ಶೋಷಣೆ, ದೌರ್ಜನ್ಯ, ಜಮೀನಿನ ಖಾತೆ, ಪಹಣಿ, ಸ್ಮಶಾನ, ಸಮುದಾಯ ಭವನ, ಎಸ್‌ಸಿಎಸ್ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ, ಅಕ್ರಮ ಮದ್ಯ ಮಾರಾಟ, ಪೊಲೀಸ್ ನಡವಳಿಕೆ, ಕಾಮಗಾರಿಗಳಿಗೆ ನಾಮಫಲಕ, ಆಶ್ರಯ ಯೋಜನೆ ಮುಂತಾದ ಸಮಸ್ಯೆಗಳ ಬಗ್ಗೆ ಸಮಾಜದ ಮುಖಂಡರು ತಿಳಿಸಿದ್ದಾರೆ. ಇವುಗಳನ್ನು ಆಯೋಗವು ಕುಲಂಕುಶವಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಡಾ.ಎಲ್.ಮೂರ್ತಿ ತಿಳಿಸಿದರು. ಎಲ್ಲ ಇಲಾಖೆಗಳಿಂದ ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ಪಡೆದು, ವಿಸ್ತೃತವಾಗಿ ಚರ್ಚಿಸಿದರು. ಎಸ್‌ಸಿ, ಎಸ್‌ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢರಾಗಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಕಾಮಗಾರಿಗಳಿಗೆ ನಾಮಫಲಕ ಅಳವಡಿಸಿ:
ಎಸ್ಸಿಎಸ್ಪಿ ಟಿಎಸ್ಪಿ ಅನುದಾನ ಯೋಜನೆಯಡಿ ಕೈಗೊಂಡಿರುವ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳು ಮುಗಿದ ನಂತರ ಅಲ್ಲಿ ನಾಮಫಲಕ ಅಳವಡಿಸಿ ಇದರಿಂದ ಅಕ್ರಮ ಬಿಲ್ಲುಗಳು ಮಾಡಿಕೊಳ್ಳುವುದು ತಪ್ಪುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕೇರಿ, ಕಾಲನಿಗಳಲ್ಲಿ ಸಣ್ಣ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಸಮುದಾಯದ ಜನರು ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇದನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.