Progress in grey water management
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಮನೆಗಳ ಸ್ನಾನಗೃಹ, ಅಡುಗೆಮನೆ ತ್ಯಾಜ್ಯ ನೀರು ಮತ್ತು ಬಟ್ಟೆ ತೊಳೆಯುವಿಕೆಯಿಂದ ಹೊರಬರುವ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಪ್ರಕ್ರಿಯೆಯಾದ ಬೂದು ನೀರು ನಿರ್ವಹಣೆ ಯೋಜನೆಯಲ್ಲಿ ಗ್ರಾಮಾಂತರ ಜಿಲ್ಲೆ ಮುಂದಿದೆ.
ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆಯಲ್ಲಿ 397 ಗ್ರಾಮಗಳು ಯಶಸ್ವಿಯಾಗಿದ್ದು, 481 ಗ್ರಾಮಗಳು ಭಾಗಶಃ ಯಶಸ್ವಿಯಾಗಿವೆ. ಕೆಲವೆ ದಿನಗಳಲ್ಲಿ 481 ಗ್ರಾಮಗಳು ಸಂಪೂರ್ಣವಾಗಿ ಬೂದು ನೀರು ನಿರ್ವಹಣೆ ಗುರಿ ಸಾಧಿಸಲಿವೆ ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ. ಈ ಯೋಜನೆ ನೀರಿನ ಉಳಿತಾಯ, ಅಂತರ್ಜಲ ವೃದ್ಧಿ ಮತ್ತು ಪರಿಸರ ನೈರ್ಮಲ್ಯಕ್ಕೆ ನೆರವಾಗುತ್ತದೆ. ಇಂಗು ಗುಂಡಿಗಳಿಂದ, ಸಸಿಗಳಿಗೆ ನೀರುಣಿಸುವುದು ಮತ್ತು ನೈಸರ್ಗಿಕ ಶೋಧನೆ ವಿಧಾನಗಳಿಂದ ಕೂಡಿದೆ. ಬೂದು ನೀರು ನಿರ್ವಹಣೆಯಲ್ಲಿ 397 ಗ್ರಾಮಗಳು ಮಾದರಿಯಾಗಿದೆ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮ ಪಂಚಾಯತಿ ಮಟ್ಟದ ಹಂತದಲ್ಲಿ ಇದರ ಅನುಷ್ಠಾನವಾಗಿದ್ದು ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆ ಪ್ರಗತಿ ಉತ್ತಮವಾಗಿದೆ.
ಬೂದು ನೀರು ನಿರ್ವಹಣೆಯಲ್ಲಿ ಪ್ರಗತಿ:
ದೇವನಹಳ್ಳಿ ತಾಲೂಕಿನ 88 ಗ್ರಾಮ, ಹೊಸಕೋಟೆ ತಾಲೂಕಿನ 132, ನೆಲಮಂಗಲ ತಾಲೂಕಿನ 117, ದೊಡ್ಡಬಳ್ಳಾಪುರ ತಾಲೂಕಿನ 144 ಗ್ರಾಮಗಳು ಮಾದರಿ ಗ್ರಾಮಗಳಾಗಿ ಘೋಷಿಸಲು ಬಾಕಿ ಇದೆ ಎಂದು ಜಿಲ್ಲಾ ಪಂಚಾಯಿತಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದರ ಅನುಷ್ಠಾನ ಗುರಿಯನ್ನು ನಿಗದಿ ಮಾಡಿದ್ದು, ಬಯಲು ಮುಕ್ತ ಶೌಚಗೃಹ, ಗ್ರಾಮದಲ್ಲಿ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಆರೋಗ್ಯಕರ ಪರಿಸರ ನಿರ್ಮಾಣ, ಸಾರ್ವಜನಿಕ ನೈರ್ಮಲ್ಯ, ಸುಧಾರಿಸುವ ನಿಟ್ಟಿನಲ್ಲಿ ಆಶಾದಾಯಕ ಪ್ರಗತಿ ಸಾಧಿಸಿರುವ ಗ್ರಾಮಗಳು ಮಾದರಿ ಗ್ರಾಮಗಳಾಗಿ ಹೆಸರು ಪಡೆದುಕೊಳ್ಳುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆಗೆ ಅಗತ್ಯವಾಗಿರುವ ಸಹಾಯಧನ ಮತ್ತು ಸೌಲಭ್ಯಗಳ ಬಗ್ಗೆ ಗ್ರಾಮಾಂತರ ಭಾಗದಲ್ಲಿ ಮತ್ತಷ್ಟು ಅರಿವು ಮೂಡಿಸಬೇಕಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಬರುವವರಿಗೆ ಮಾತ್ರ ಬೂದು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರೆ ಸಾಲದು ಈ ಯೋಜನೆ ಪ್ರತಿ ಮನೆ ಮನೆಗೂ ಮುಟ್ಟಬೇಕು, ಈ ಯೋಜನೆಗೆ ಸರ್ಕಾರದಿಂದ ಸಿಗುವ ಅನುದಾನ ಹಾಗೂ ಪಂಚಾಯಿತಿ ಸಹಕಾರದ ಬಗ್ಗೆ ಗ್ರಾಮಸ್ಥರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು. ಇದರಿಂದ ಕುಗ್ರಾಮಗಳೂ ಮಾದರಿ ಗ್ರಾಮಗಳ ಸಾಲಿಗೆ ಸೇರಲಿವೆ ಎಂಬ ಮಾತು ಕೇಳಿಬರುತ್ತಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆ ಯೋಜನೆಯಲ್ಲಿ ಉತ್ತಮ ಪ್ರಗತಿ ಕಂಡಿದೆ. ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದರಿ ಗ್ರಾಮಗಳ ಘೋಷಣೆಯಾಗಲಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಲಾಗುತ್ತಿದೆ, ಗ್ರಾಮಸ್ತರು ಸಹ ಈ ಯೋಜನೆಗೆ ಕೈಜೋಡಿಸುವ ಮೂಲಕ ಯಶಸ್ವಿಗೆ ಕಾರಣರಾಗಬೇಕು.
ಡಾ.ಕೆ.ಎನ್.ಅನುರಾಧಾ, ಜಿಪಂ ಪ್ರಭಾರ ಸಿಇಒ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಬೂದು ನೀರು ನಿರ್ವಹಣೆಯಲ್ಲಿ ಸಾಕಷ್ಟು ಪ್ರಯೋಜನಗಳು ಇವೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವ ಪ್ರಯತ್ನ ನಡೆಯುತ್ತಿದೆ. ಅಂತರ್ಜಲ ಮಟ್ಟ ಸುಧಾರಣೆ ಹಾಗೂ ಜೀವಜಲ ರಕ್ಷಣೆಯಲ್ಲಿ ಇದು ಪರಿಣಾಮಕಾರಿಯಾಗಿದೆ.
ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ