ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸೆಪ್ಟೆಂಬರ್ 05 ರಂದು ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮೊದಲ ಪ್ರಜಾ ಸೇವಾ ಆಂದೋಲನ ಸಭೆ ಆಯೋಜಿಸಲಾಗಿದ್ದು ಸಾರ್ವಜನಿಕರು ಕುಂದು ಕೊರತೆಗಳ ಅಹವಾಲುಗಳನ್ನು ಸ್ಥಳಕ್ಕೆ ಬಂದು ಸಲ್ಲಿಸಬಹುದಾಗಿದೆ ಜತೆಗೆ ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧಾ ತಿಳಿಸಿದರು.
ದೇವನಹಳ್ಳಿ ಟೌನ್ ನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಸೇವಾ ಆಂದೋಲನದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಪ್ರಜಾ ಸೇವಾ ಇಲಾಖೆಯು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಸರ್ಕಾರದ ವಿನೂತನ ಕಾರ್ಯಕ್ರಮವಾದ ಪ್ರಜಾ ಸೇವಾ ಜನಾಂದೋಲನ ಸಭೆಯನ್ನು ಪ್ರತಿ ಶನಿವಾರ ಪ್ರತಿ ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗುತ್ತಿದೆ. ಜತೆಗೆ ಸ್ಥಳಿಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ನಡೆಸಲಾಗುವುದು ಇದು ಸಾರ್ವಜನಿಕರಿಗೆ ಬಹಳ ಅನುಕೂಲಕರವಾದ ಯೋಜನೆಯಾಗಿದ್ದು ಜನರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಜಾಸೇವಾ ಯೋಜನೆಯ ಭಾಗವಾಗಿ ಸೆ.5 ರಂದು ಶನಿವಾರ ಮೊದಲ ಪ್ರಜಾ ಸೇವಾ ಆಂದೋಲನ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷತೆಯಲ್ಲಿ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12.30 ಗಂಟೆಗೆ ಆಯೋಜಿಸಲಾಗಿದೆ. ಸಾರ್ವಜನಿಕರ ಮನೆಬಾಗಿಲಿಗೆ ಮುಖ್ಯಮಂತ್ರಿಗಳ ಸಂದೇಶ ಪತ್ರ, ಕುಂದುಕೊರತೆ ಅರ್ಜಿ ನಮೂನೆ ವಿತರಿಸಲು ಪಿಡಿಒ ಸೇರಿ ಸ್ಥಳಿಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಅರ್ಜಿ ನಮೂನೆ ಪಡೆದು ಯಾವ ಇಲಾಖೆಗೆ ಸಂಬಂಧಿಸಿದ ಸೌಲಭ್ಯ, ಅಹವಾಲು ಇದೆ ಎಂಬುದನ್ನು ಭರ್ತಿ ಮಾಡಿ ಕೌಂಟರ್ಗಳಲ್ಲಿ ನೀಡಬೇಕು ಸ್ಥಳದಲ್ಲಿ ಪರಿಹರಿಸುವ ಅಹವಾಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಹರಿಸಲಾಗುವುದು, ಉಳಿದ ಅರ್ಜಿಗಳನ್ನು ಸ್ವೀಕರಿಸಿ, ಸ್ವೀಕೃತಿ ಕಾಪಿ ಅರ್ಜಿದಾರರಿಗೆ ನೀಡಲಾಗುವುದು ಡಿಸಿ ಅನುರಾಧಾ ತಿಳಿಸಿದರು.
ಪಿಂಚಣಿ ಸೇವೆ, ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನ, ವಿಶೆಷ ಚೇತನರ ಯೋಜನೆಗಳು,
ಕಂದಾಯ ಸಮಸ್ಯೆಗಳು, ಗ್ಯಾರಂಟಿ ಯೋಜನೆಗಳ ಸೌಲಭ್ಯ, ಹೊಸ ಪಡಿತರ ಚೀಟಿ, ರಸ್ತೆ, ಕುಡಿಯುವ ನೀರು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಅಭಿವೃದ್ಧಿ, ಪೊಲೀಸ್ ಇಲಾಖೆ ಸೇವೆ, ನೀರಾವರಿ ಯೋಜನೆ ಸೇರಿ ಹತ್ತು ಹಲವು ಯೋಜನೆಗಳು ಹಾಗೂ ಸಮಸ್ಯೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ವಾಸಂತಿ ಅಮರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಜನಸಾಮಾನ್ಯರ ಅಹಾವಾಲುಗಳನ್ನು ಆಲಿಸಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅರ್ಜಿ ಸ್ವೀಕೃತಿಗೆ ಕೌಂಟರಗಳನ್ನು ಸ್ಥಾಪಿಸಲು, ಸರ್ಕಾರದ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಆದೇಶ ಪತ್ರವನ್ನು ಸ್ಥಳದಲ್ಲಿ ವಿತರಿಸಲು, ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿ ಆಗತ್ಯ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು