ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಒಂದೇ ಸೂರಿನಡಿ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಮಾಹಿತಿ ನೀಡಿದರು.
ದೇವನಹಳ್ಳಿ ಜಿಲ್ಲಾಡಳಿತಭವನದಲ್ಲಿ ಶುಕ್ರವಾರ ಪ್ರಜಾಸೇವಾ ಕುರಿತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿ ಶೀಘ್ರ ಪರಿಹಾರ ಒದಗಿಸುವ ಸಲುವಾಗಿ ಸೆ.5ರಂದು ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರಜಾ ಸೇವಾ ಆಂದೋಲನದ ಮೊದಲ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಸಾರ್ವಜನಿಕರು ದೂರು, ಅಹವಾಲುಗಳನ್ನು ಅರ್ಜಿ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಒಂದೇ ಸೂರಿನಡಿ ಪಿಂಚಣಿ, ಪಹಣಿ, ವಸತಿ, ಹೊಸ ಪಡಿತರ ಚೀಟಿ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಸ್ಥಾನ ಜೀಣೋರ್ದ್ಧಾರ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿ, ಇಲಾಖೆ ಸೌಲಭ್ಯಗಳು ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಒಂದನೇ ಮತ್ತು ಮೂರನೇ ಶನಿವಾರ ಸಭೆ:
ಪ್ರತಿ ಶನಿವಾರ ಪ್ರಜಾ ಸೇವಾ ಆಂದೋಲನ ಸಭೆಗಳು ನಡೆಯಲಿವೆ. ಒಂದನೇ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರ ಸ್ಥಳಿಯ ಶಾಸಕರ ಅಧ್ಯಕ್ಷತೆಯಲ್ಲಿ ಆಂದೋಲನ ಸಭೆಗಳು ನಡೆಯಲಿವೆ ಎಂದು ಡಿಸಿ ಮಾಹಿತಿ ನೀಡಿದರು. ಸೆ.5 ರಂದು ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕು ಕಚೇರಿಗಳಲ್ಲಿ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ದೇವನಹಳ್ಳಿ ತಾಲೂಕಿನ ಸಭೆಯನ್ನು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕರು ಅರ್ಜಿ ಸಲ್ಲಿಸಲು ನಿಗದಿತ ನಮೂನೆ ಇದ್ದು, ನಮೂನೆಗಳನ್ನು ಪಿಡಿಒ, ಕಂದಾಯ ಅಧಿಕಾರಿಗಳ ಮೂಲಕ ಮನೆ ಮನೆಗೆ ವಿತರಿಸಲಾಗುತ್ತಿದೆ. ಅಹವಾಲು, ಅರ್ಜಿ ಸಲ್ಲಿಕೆಗೆ 15 ಕೌಂಟರ್ಗಳನ್ನು ತೆರೆಯಲಾಗಿದ್ದು ಗ್ರಾಮ ಒನ್, ಕರ್ನಾಟಕ ಒನ್ ಕಂಪ್ಯೂಟರ್ ಆಪರೇಟರ್ ಗಳು ಅರ್ಜಿ ಸ್ವೀಕರಿಸುವರು, ಪ್ರತಿ ಕೌಂಟರ್ ಗೆ ಒಬ್ಬರು ನೋಡಲ್ ಆಫೀಸರ್ ನೇಮಕ ಮಾಡಲಾಗಿದೆ. ಅವರು ಆ ಕೌಂಟರ್ ನ ಉಸ್ತುವಾರಿ ನೋಡಿಕೊಳ್ಳುವರು ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಾರ್ವಜನಿಕರು ಸಲ್ಲಿಸುವ ಅಹವಾಲುಗಳ ಪೈಕಿ ಸ್ಥಳದಲ್ಲೇ ಪರಿಹರಿಸುವ ಸಮಸ್ಯೆ ಇದ್ದಲ್ಲಿ ಅಲ್ಲಿಯೇ ಇತ್ಯರ್ಥ ಪಡಿಸಲಿದ್ದಾರೆ ಎಂದು ತಿಳಿಸಿದರು. ಉಳಿದ ಅರ್ಜಿಗಳನ್ನು ಪೋರ್ಟಲ್ ಮೂಲಕ ನಮೂದಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುತ್ತದೆ. ಅರ್ಜಿದಾರರು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ಅರ್ಜಿ ಸ್ಥಿತಿ ಪರಿಶೀಲನೆ ನಡೆಸಬಹುದು. ಪ್ರಜಾ ಸೇವಾ ಆಂದೋಲನದಲ್ಲಿ ಬಂದಂತಹ ಅರ್ಜಿಗಳನ್ನು ಪ್ರತಿ ಬುಧವಾರ ಜಿಲ್ಲಾಧಿಕಾರಿ ಹಂತದಲ್ಲಿ ಪರಿಶೀಲನೆ ಮಾಡಲಾಗುವುದು ಎಂದರು.