ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡುತ್ತಿದ್ದೇವೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಜಂತುಹುಳು ಮಾತ್ರೆ ನೀಡುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು. ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಂತುಹುಳು ನಿವಾರಣ ದಿನಾಚರಣೆ ಅಂಗವಾಗಿ ಜಂತುಹುಳು ನಿವಾರಣಾ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಣೆ ಮಾಡುವ ದೃಷ್ಟಿಯಲ್ಲಿ ಈ ಕಾಯಕ್ರಮ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇಂದಿನ ಮಕ್ಕಳು ಆರೋಗ್ಯವಾಗಿದ್ದರೆ ದೇಶ ಸಧೃಡವಾಗಿರುತ್ತದೆ, ಜಂತುಹುಳುಗಳಿಂದ ಆರೋಗ್ಯ ಹದಗೆಟ್ಟು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅನುದಾನ ರಹಿತ ಶಾಲಾ ಮಕ್ಕಳಿಗೂ ಮಾತ್ರೆ:
ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಪ್ರತಿ ವರ್ಷ ಫೆ.16 ಮತ್ತು ಆ.10 ರಂದು ಜಂತು ಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆೆ. 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತದೆ, ಅಂಗನವಾಡಿ, ಸರ್ಕಾರಿ, ಅನುದಾನ ಶಾಲಾ, ಕಾಲೇಜುಗಳ ಮಕ್ಕಳಿಗೆ ಮಾತ್ರೆ ನೀಡಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಸರ್ಕಾರಿ ಅನುದಾನ ರಹಿತ ಶಾಲೆಗಳಲ್ಲಿನ ಮಕ್ಕಳಿಗೂ ಮಾತ್ರೆಯನ್ನು ವಿತರಿಸಲಾಗುತ್ತದೆ ಎಂದು ಸಿಇಒ ಮಾಹಿತಿ ನೀಡಿದರು. ಸರ್ಕಾರ ಮಕ್ಕಳು ಆರೋಗ್ಯವಂತರಾಗಿರಲು ಬಿಸಿಯೂಟ, ಅಕ್ಷರ ದಾಸೋಹ, ಮೊಟ್ಟೆ, ಹಾಲು ವಿತರಣೆ ಜತೆಗೆ ಪ್ರತಿ ವರ್ಷಕ್ಕೆ ಎರಡು ಬಾರಿ ಜಂತು ಹುಳು ಮಾತ್ರೆ ಹಾಗೂ ವಾರಕ್ಕೆ ಒಂದು ಕಬ್ಬಿಣಾಂಶ ಮಾತ್ರೆಗಳು ಹೀಗೇ ಹಲವು ಸೌಲಭ್ಯಗಳನ್ನು ಕಲ್ಪಿಸಿಸಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ಇವೆಲ್ಲ ಸೌಲಭ್ಯಗಳು ಮಕ್ಕಳು ಆರೋಗ್ಯ ಹಾಗೂ ಪೌಷ್ಟಿಕಾಂಶಯುಕ್ತ ಜೀವನಕ್ಕೆ ಬಹಳ ಸಹಕಾರಿಯಾಗಿದೆ ಈ ನಿಟ್ಟಿನಲ್ಲಿ ಮಕ್ಕಳು ಆರೋಗ್ಯ ಕಾಪಾಡಿಕೊಂಡು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಸಿಇಒ ಆಶಿಸಿದರು.