ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂ. 28 ರಿಂದ ಜು.1 ರವರೆಗೆ ನಡೆಸಲಿದ್ದು, ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಪೊಲೀಯೋ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಮನವಿ ಮಾಡಿದರು.
ದೇವನಹಳ್ಳಿ ಜಿಲ್ಲಾಡಳಿತಭವನದಲ್ಲಿ ಬುಧವಾರ ಪಲ್ಸ್ ಪೊಲೀಯೋ ಲಸಿಕೆ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸಲಾಗುತ್ತದೆ. ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 1,00,434 ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕುವ ಗುರಿಯನ್ನು ಹೊಂದಿದ್ದು, 479 ಬೂತ್‌ಗಳಲ್ಲಿ 2046 ಲಸಿಕಾದಾರರು ಈ ಅಭಿಯಾನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.
ಇಲ್ಲಿಯವರೆಗೂ ಎಷ್ಟೇ ಬಾರಿ ಪಲ್ಸ್ ಪೋಲಿಯೋ ಹನಿ ಹಾಕಿಸಿದರೂ ಜೂ.28 ರಿಂದ ಜು.1 ರವರೆಗೆ ನಡೆಯುವ ಅಭಿಯಾನದಲ್ಲಿ ಭಾಗಿಯಾಗಿ 0-5 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರು ಪಲ್ಸ್ ಪೋಲಿಯೋ ಹಾಕಿಸುವುದನ್ನು ಮರೆಯಬಾರದು ಎಂದು ಡಿಸಿ ಮನವಿ ಮಾಡಿದರು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆಯುಷ್ಮಾನ್ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು, ಬಸ್‌ಸ್ಟಾಪ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಟೋಲ್ಗಳಲ್ಲಿ ಪೋಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗಿದೆ, ಹತ್ತಿರದ ಪೋಲಿಯೋ ಬೂತ್ ನಲ್ಲಿ ತಮ್ಮ ಮಕ್ಕಳಿಗೆ ಉಚಿತ ಲಸಿಕೆ ಹಾಕಿಸಬಹದಾಗಿದೆ ಎಂದು ಮಾಹಿತಿ ನೀಡಿದರು.