ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ 7 ಪರೀಕ್ಷಾ ಕೇಂದ್ರಗಳಲ್ಲಿ ಆ.2ರಂದು ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳು ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಕೆ.ಅನುರಾಧಾ ಸೂಚನೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು.
7 ಕೇಂದ್ರಗಳ ಸುತ್ತಲೂ ಹೈ ಅಲರ್ಟ್ ಇರಬೇಕು. ಪರೀಕ್ಷೆಗೆ 3463 ಅಭ್ಯರ್ಥಿಗಳು ಹಾಜರಾಗಲಿದ್ದು, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.
ಸುಸ್ಥಿತಿ ಖಾತ್ರಿ ಮಾಡಿಕೊಳ್ಳಬೇಕು:
ಜಿಲ್ಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಕಡ್ಡಾಯವಾಗಿದ್ದು, ಅವುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಅಭ್ಯರ್ಥಿಗಳು ಪರೀಕ್ಷೆಯ ನಿಗಧಿತ ಅವಧಿಯೊಳಗೆ ಪರೀಕ್ಷಾ ಕೊಠಡಿಯಲ್ಲಿ ಹಾಜರಿರಬೇಕು ಈ ವೇಳೆ ಕುಳಿತುಕೊಳ್ಳುವ ಮೇಜು ಸೇರಿ ಎಲ್ಲ ವಸ್ತುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಮೊದಲೆ ಗಮನಿಸಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ನಕಲು ಸೇರಿ ಇನ್ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದವಾಗದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಹಮ್ಮಿಕೊಳ್ಳಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಇದರಲ್ಲಿ ಯಾವುದೇ ಕರ್ತವ್ಯ ಲೋಪ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಾಲ್ಕೂ ತಾಲೂಕುಗಳ ತಹಸೀಲ್ದಾರ್‌ಗಳ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳು ಹಾಗೂ ಅಭ್ಯರ್ಥಿಗಳ ಸಂಖ್ಯೆ:
* ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು(ಬಿಬಿ 0009), ವಿವೇಕಾನಂದ ರಸ್ತೆ, ದೊಡ್ಡಬಳ್ಳಾಪುರ, ಕೇಂದ್ರ ಸಂಖ್ಯೆ: 101, ಅಭ್ಯರ್ಥಿಗಳ ಸಂಖ್ಯೆ: 751.
* ಸರ್ಕಾರಿ ಪದವಿ ಪೂರ್ವ ಕಾಲೇಜು(ಬಿಬಿ 0010), ಗಂಗಾಧರಪುರ, ಮಾದಗೊಂಡನಹಳ್ಳಿ ರಸ್ತೆ, ದೊಡ್ಡಬಳ್ಳಾಪುರ ಕೇಂದ್ರ ಸಂಕೇತ: 102, ಅಭ್ಯರ್ಥಿಗಳ ಸಂಖ್ಯೆ: 432.
* ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ) (ಬಿಬಿ0047), ಹೊಸ ಬಸ್ ನಿಲ್ದಾಣ(ಕೆಎಸ್‌ಆರ್‌ಟಿಸಿ), ದೊಡ್ಡಬಳ್ಳಾಪುರ ಕೇಂದ್ರ ಸಂಕೇತ: 103, ಅಭ್ಯರ್ಥಿಗಳ ಸಂಖ್ಯೆ: 504.
* ಶ್ರೀ ದೇವರಾಜ್ ಅರಸು ಪದವಿ ಪೂರ್ವ ಕಾಲೇಜು(ಬಿಬಿ 0088), ಕೊಡಿಗೆಹಳ್ಳಿ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 104, ಅಭ್ಯರ್ಥಿಗಳ ಸಂಖ್ಯೆ: 600.
* ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜು(ಬಿಬಿ0162), ಗಂಗಾಧರಪುರ ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 105, ಅಭ್ಯರ್ಥಿಗಳ ಸಂಖ್ಯೆ: 312.
* ಶ್ರೀ ವಾಣಿ ಪದವಿ ಪೂರ್ವ ಕಾಲೇಜು (ಬಿಬಿ0209) ಪಾಲನಜೋಗಿಹಳ್ಳಿ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 106, ಅಭ್ಯರ್ಥಿಗಳ ಸಂಖ್ಯೆ: 384.
* ಸರ್ಕಾರಿ ಪ್ರಥಮ ದರ್ಜೆ ಕಾಲೇಜು, (ಬಿಬಿ 3001), ಮಾದಗೊಂಡನಹಳ್ಳಿ, ಬಸವ ಭವನ ರಸ್ತೆ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 107, ಅಭ್ಯರ್ಥಿಗಳ ಸಂಖ್ಯೆ: 480.