ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು ಮತ್ತೊಂದು ಜವಾಬ್ದಾರಿ ಹೆಗಲಿಗೆ ಹೊತ್ತಿಕೊಂಡಿದ್ದಾರೆ. ಠಾಣಾ ವ್ಯಾಪ್ತಿಯಲ್ಲಿನ ಕೃಷಿಹೊಂಡಗಳತ್ತ ಪೊಲೀಸರು ಇನ್ಮುಂದೆ ಗಸ್ತು ತಿರುಗಬೇಕಿದೆ.
ಹೌದು..ದೊಡ್ಡಬಳ್ಳಾಪುರ ತಾಲೂಕಿನ ತೊಗರಿಟ್ಟ ಗ್ರಾಮದಲ್ಲಿ ಶನಿವಾರ ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಪಕ್ಕದಲ್ಲೇ ಇದ್ದ ಕೃಷಿ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಪ್ರಕರಣ ಬಳಿಕ ಇಂಥ ದುರ್ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಡಿವೈಎಸ್‌ಪಿ ಪಾಂಡುರಂಗ ಪೊಲೀಸ್ ಸಿಬ್ಬಂದಿಗೆ ಸೂಚನೆ ರವಾನಿಸಿದ್ದಾರೆ. ಜಿಲ್ಲಾ ಕೃಷಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಆರಂಭಿಸಿರುವ ಪೊಲೀಸರು ಪ್ರಾಥಮಿಕ ಹಂತದಲ್ಲಿ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೃಷಿಹೊಂಡಗಳ ಬಳಿ ಗಸ್ತು ಆರಂಭಿಸಿದ್ದು, ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ಕೃಷಿಹೊಂಡಗಳಿವೆ? ಎಷ್ಟು ಹೊಂಡಗಳಿಗೆ ತಂತಿಬೇಲಿ ಅಳವಡಿಸಲಾಗಿದೆ? ಎಷ್ಟು ಸುರಕ್ಷತೆ ಇದೆ? ಎಂಬುದರ ಮಾಹಿತಿ ಸಂಗ್ರಹಿಸುವ ಕೆಲಸ ನಡೆಸುತ್ತಿದ್ದಾರೆ.
ರೈತರಿಗೆ ಜಾಗೃತಿ ಜತೆ ಎಚ್ಚರಿಕೆ:
ಕೃಷಿಹೊಂಡಗಳಿಗೆ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಬಗ್ಗೆ ರೈತಾಪಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಜತೆ ಇಂಥ ಪ್ರಕರಣಗಳಿಗೆ ಕೃಷಿ ಹೊಂಡ ಮಾಲೀಕರ ಬೆಜಾಬ್ದಾರಿಯೇ ಕಾರಣ ಎಂದು ಮಾಲೀಕರ ವಿರುದ್ಧ ಎ್ಐಆರ್ ದಾಖಲಿಸುವ ಎಚ್ಚರಿಕೆ ರವಾನಿಸುತ್ತಿದ್ದಾರೆ. ಕೃಷಿ ಹೊಂಡಗಳು ಈಜುಕೊಳಗಳಲ್ಲ, ಕೃಷಿ ಹೊಂಡಗಳಲ್ಲಿ ಈಜಲು ಹೋಗುವವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು, ಜತೆಗೆ ಹೊಂಡಗಳಿಗೆ ಈಜಲು ಮತ್ತಿತರ ಚಟುವಟಿಕೆಗೆಳಿಗೆ ಮುಂದಾಗಲು ಪ್ರೋತ್ಸಾಹಿಸುವವ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಡಿವೈಎಸ್‌ಪಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ಠಾಣಾ ವ್ಯಾಪ್ತಿಯಲ್ಲಿ ಆರಂಭಿಸಿರುವ ಕೃಷಿಹೊಂಡ ಗಸ್ತು ಯೋಜನೆಯನ್ನು ಜಿಲ್ಲೆಯ ನಾಲ್ಕೂ ತಾಲೂಕುಗಳ ವ್ಯಾಪ್ತಿಗೂ ವಿಸ್ತರಿಸುವ ಬಗ್ಗೆ ಪೊಲೀಸರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಜಿಲ್ಲಾ ನೀರಾವರಿ ಇಲಾಖೆ ಸಿಬ್ಬಂದಿ ಸಮ್ಮತಿ ಸೂಚಿಸಿದ್ದು, ಜಿಲ್ಲೆಯಲ್ಲಿನ ಕೃಷಿಹೊಂಡಗಳತ್ತ ಗಮನ ಹರಿಸಲು ಸಿಬ್ಬಂದಿ ಮುಂದಾಗಿದ್ದಾರೆ ಎನ್ನಲಾಗಿದೆ.
ಕೃಷಿ ಹೊಂಡಗಳ ಮಾಲೀಕರು ಕೂಡಲೇ ತಂತಿ ಬೇಲಿ ಅಳವಡಿಸಿಕೊಳ್ಳಬೇಕು,ಇಲ್ಲವಾದರೆ ಅವಘಡಕ್ಕೆ ಕೃಷಿ ಹೊಂಡಗಳ ಮಾಲೀಕರೇ ಜವಾಬ್ದಾರರಾಗುತ್ತಾರೆ, ಕೃಷಿ ಹೊಂಡಗಳು ಈಜುಕೊಳಗಳಲ್ಲ, ಅದನ್ನು ಕೇವಲ ಕೃಷಿ ಚಟುವಟಿಕೆಗಳಿಗಷ್ಟೇ ಬಳಸಬೇಕು, ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಕೃಷಿ ಹೊಂಡಗಳ ನಿರ್ವಹಣೆ ಮಾಡಬೇಕು ಇಲ್ಲವಾದರೆ ಇಂಥ ಪ್ರಕರಣಗಳಲ್ಲಿ ಮಾಲೀಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಪಾಂಡುರಂಗ, ಡಿವೈಎಸ್‌ಪಿ ದೊಡ್ಡಬಳ್ಳಾಪುರ
ಪೊಲೀಸ್ ಠಾಣಾಧಿಕಾರಿ ಮತ್ತು ಬೀಟ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿನ ಕೃಷಿ ಹೊಂಡಗಳ ಮಾಹಿತಿ ಸಂಗ್ರಹಿಸಬೇಕು, ಈ ಭಾಗಗಳಲ್ಲಿ ಗಸ್ತು ನಡೆಸಬೇಕು ಎಂದು ಡಿವೈಎಸ್‌ಪಿ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಸಭೆ ನಡೆಸಿ ಸಂದೇಶ ರವಾನಿಸಲಾಗಿದೆ. ಕೃಷಿ ಹೊಂಡಳಿಗೆ ತಂತಿ ಬೇಲಿ ಅಳವಡಿಸಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು, ಮಕ್ಕಳು, ಜಾನುವಾರು, ವೃದ್ಧರು ಕೃಷಿ ಹೊಂಡಗಳ ಬಳಿ ತೆರಳದಂತೆ ಮುಂಜಾಗ್ರತೆ ವಹಿಸಲು ಸೂಚನೆ ನೀಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಡಾ.ಎಂ.ಬಿ. ನವೀನ್ ಕುಮಾರ್. ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ