pm kissana 
ಬೆಂಗಳೂರು ಗ್ರಾಮಾಂತರ

ಅನ್ನದಾತರಿಗೆ ಕಿಸಾನ್ ಸನ್ಮಾನ್ ವರದಾನ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೇಂದ್ರ ಸರ್ಕಾರ ಅನ್ನದಾತ ರೈತರಿಗೆ ಕಿಸಾನ್ ಸಮ್ಮಾನ್ ನೀಡುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ವರದಾನವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಯಲಹಂಕದ ಐಸಿಎಆರ್ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಎಂ ಕಿಸಾನ್ ಸಮ್ಮಾನ್‌ನ 21 ನೇ ಕಂತು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ 86,919 ರೈತರಿಗೆ ಒಟ್ಟು 17.38 ಕೋಟಿ ರೂ. ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55,731 ರೈತರಿಗೆ 11.15 ಕೋಟಿ ರೂ.ನೆರವು ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ 2018-19 ರಿಂದ ಕಿಸಾನ್ ಸಮ್ಮಾನ್ ಯೋಜನೆ ಪ್ರಾರಂಭವಾಯಿತು. ಈವರೆಗೆ 9 ಕೋಟಿ ರೈತರಿಗೆ 3.91 ಲಕ್ಷ ಕೋಟಿ ರೂಪಾಯಿ ನೇರವಾಗಿ ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿದೆ. ಈಗ 21 ನೇ ಕಂತಿನಲ್ಲಿ ಒಂದೇ ದಿನ 18,000 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಪೈಕಿ ಕರ್ನಾಟಕದ ರೈತರಿಗೆ 850 ಕೋಟಿ ರೂ. ದೊರೆತಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ, ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೇಂದ್ರದ 6 ಸಾವಿರ ರೂ. ಜತೆಗೆ 4 ಸಾವಿರ ರೂ. ಸೇರಿಸಿ ಒಟ್ಟು 10 ಸಾವಿರ ರೂ. ನೀಡುತ್ತಿತ್ತು ಎಂದು ತಿಳಿಸಿದರು.
ಮಳೆ ಅವಲಂಬನೆ ತಡೆಗೆ ಸಿಂಚಾಯಿ:
ಕೃಷಿ ಸಿಂಚಾಯಿ ಯೋಜನೆಯಡಿ ಮಳೆಯ ಮೇಲೆ ಅವಲಂಬನೆ ಕಡಿಮೆ ಮಾಡಲು ಹನಿ ನೀರಾವರಿ ವ್ಯವಸ್ಥೆ ತರಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಯಡಿ 18 ಲಕ್ಷ ರೈತರಿಗೆ ಅನುದಾನ ನೀಡಲಾಗಿತ್ತು. ಕಿಸಾನ್ ಮಾನ್ ಧನ್ ಯೋಜನೆಯಡಿ 18-44 ವರ್ಷ ವಯಸ್ಸಿನ ರೈತರಿಂದ ತಿಂಗಳಿಗೆ 50-150 ರೂ. ಪ್ರೀಮಿಯಂ ಪಡೆದು, 60 ವರ್ಷದ ನಂತರ 3 ಸಾಇರ ರೂಪಾಯಿ ಪಿಂಚಣಿ ನೀಡಲಾಗುತ್ತಿದೆ. ಫಸಲ್ ಭೀಮಾ ಯೋಜನೆಯಡಿ, 23 ಕೋಟಿ ರೈತರಿಗೆ ಲಾಭ ದೊರೆತಿದ್ದು, 1.75 ಲಕ್ಷ ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಸಂಸದರು ವಿವರಿಸಿದರು.
ಕೇಂದ್ರದಿಂದ ಕೃಷಿ ಕ್ಷೇತ್ರ ಸುಧಾರಣೆ:
ಮಣ್ಣಿನ ಹೆಲ್ತ್ ಕಾರ್ಡ್‌ನಡಿ ಮಣ್ಣಿನ ಗುಣಮಟ್ಟ ಪರೀಕ್ಷೆ, ನೈಸರ್ಗಿಕ ಕೃಷಿ ಪ್ರಚಾರ, ಸಹಜ ಕೃಷಿ ಹೀಗೆ ಅನೇಕ ಕ್ರಮಗಳಿಂದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುತ್ತಿದೆ ಎಂದು ಸಂಸದರು ತಿಳಿಸಿದರು. ರೈತರು ಮಣ್ಣಿಗೆ ಹಾನಿಕಾರಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸಬಾರದು. ಈ ಬಗ್ಗೆ ಕೃಷಿ ಅಧಿಕಾರಿಗಳು ರೈತರಲ್ಲಿ ಜಾಗೃತಿ ತರಬೇಕು. ಹೆಚ್ಚು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು. ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳ ಪ್ರಯೋಜನ ನೇರವಾಗಿ ರೈತರ ಭೂಮಿಗೆ ತಲುಪುವ ವ್ಯವಸ್ಥೆ ಇರಬೇಕು ಎಂದು ಸಲಹೆ ನೀಡಿದರು.