Plot to sell Anganwadi jobs!
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಈ ಸಂದರ್ಭವನ್ನು ದುರ್ಲಾಭಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಕೆಲವು ಮಧ್ಯವರ್ತಿಗಳು ಅಭ್ಯರ್ಥಿಗಳಿಂದ ಹಣ ಸುಲಿಗೆಗೆ ಇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 56 ಕಾರ್ಯಕರ್ತೆಯರ ಹುದ್ದೆ ಹಾಗೂ 295 ಸಹಾಯಕಿಯರ ಹುದ್ದೆ ಸೇರಿ 351 ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಆಯ್ಕೆ ಪಟ್ಟಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಮಧ್ಯವರ್ತಿಗಳು ಕೆಲಸ ಖಚಿತಪಡಿಸುವ ಭರವಸೆ ನೀಡಿ ಹಣ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ 351 ಹುದ್ದೆ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇಲಾಖೆ ನೇಮಕಾತಿಯ ತಾತ್ಕಾಲಿಕಪಟ್ಟಿ ಸಿದ್ದಪಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದ್ದು, ಆಕ್ಷೇಪಗಳಿದ್ದರೆ ಸಲ್ಲಿಸಲು ಕಾಲವಕಾಶವನ್ನು ನೀಡಲಿದೆ. ಇದಾದ ಕೆಲವೇ ದಿನಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಪತ್ರ ವಿತರಿಸಲಿದೆ. ಆದರೆ ಏತನ್ಮಧ್ಯೆ ಉದ್ಘವಿಸಿರುವ ಮಧ್ಯವರ್ತಿಗಳು ತಾತ್ಕಾಲಿಕ ಪಟ್ಟಿಯಲ್ಲಿ ನಿಮ್ಮಹೆಸರನ್ನು ಸೇರಿಸುತ್ತೇವೆ, ಹುದ್ದೆಯಲ್ಲಿ ನಿಮ್ಮನ್ನು ಪರ್ಮನೆಂಟ್ ಮಾಡಿಸುತ್ತೇವೆ ಇಲಾಖಾ ಮಟ್ಟದ ಹಿರಿಯ ಅಧಿಕಾರಿಗಳ ಸಂಪರ್ಕವಿದ್ದು ಹುದ್ದೆ ನಿಮಗೆ ಕೊಡಿಸುತ್ತೇವೆ ಎಂದು ಆಮಿಷ ತೋರಿಸುತ್ತಿದ್ದಾರೆ. ಈ ಹುದ್ದೆಗಳಿಗೆ 50 ಸಾವಿರ ರೂಪಾಯಿಯಿಂದ ಲಾಂತರ ರೂಪಾಯಿವರೆಗೆ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ನೇಮಕಾತಿ ಜತೆಗೆ ವರ್ಗಾವಣೆ, ಮುಂಬಡ್ತಿ ವಿಷಯವಾಗಿಯೂ ಲಂಚದ ರೂಪದಲ್ಲಿ ಹಣ ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೆಲವರು ಇಂಥವರ ವಂಚನೆಯ ಬಲೆಗೆ ಸಿಲುಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅಧಿಕಾರಿಗಳಿಂದ ಅಭ್ಯರ್ಥಿಗಳಿಗೆ ಎಚ್ಚರಿಕೆ:
ಈ ದಂಧೆಯಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯೂ ಶಾಮೀಲಾಗಿದ್ದಾರೆ ತಾತ್ಕಾಲಿಕಪಟ್ಟಿಯ ಮಾಹಿತಿ ಸೋರಿಕೆ ಮಾಡಿ ಇದರ ಆಧಾರದಡಿ ಅಭ್ಯರ್ಥಿಗಳ ನಂಬಿಕೆ ಗಿಟ್ಟಿಸಿ ಹಣ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಸಂಶಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು ಇದೆಲ್ಲ ಸುಳ್ಳು ಆಶ್ವಾಸನೆ ಮೆರಿಟ್ ಆಧಾರದಲ್ಲಿ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ, ಹಣ ನೀಡಿ ವಂಚನೆಗೊಳಗಾಗಬೇಡಿ ಎಂದು ಎಚ್ಚರಿಕೆ ನೀಡುವ ಜತೆಗೆ ಅಭ್ಯರ್ಥಿಗಳಲ್ಲಿ ಮನವಿ ಸಹ ಮಾಡುತ್ತಿದ್ದಾರೆ.
ಪುಟಾಣಿ ಮಕ್ಕಳ ಶಾಲಾ ಪೂರ್ವಶಿಕ್ಷಣದ ದೃಷ್ಟಿಯಿಂದ ಸರ್ಕಾರ ನಡೆಸುತ್ತಿರುವ ಅಂಗನವಾಡಿಗಳು ಮಹತ್ವಪಾತ್ರ ವಹಿಸಿವೆ. ಮಕ್ಕಳಿಗೆ ಪೂರ್ವ ಶಿಕ್ಷಣದ ಜತೆಗೆ ಪೌಷ್ಠಿಕ ಆಹಾರ ನೀಡುವಿಕೆ ಸೇರಿ ಹಲವು ವಿಷಯಗಳಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪಾತ್ರ ಮಹತ್ವದ್ದಾಗಿದೆ ಇಂಥ ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖದೀಮರು ಅಭ್ಯರ್ಥಿಗಳನ್ನು ಬಲಿಪಶು ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ, ವರ್ಗಾವಣೆ ಮತ್ತು ಮುಂಬಡ್ತಿ ಪ್ರಸ್ತಾವನೆಗಳಲ್ಲಿ ಕೆಲವು ಮಧ್ಯವರ್ತಿಗಳು ಹಣ ಸಂಗ್ರಹ ಮಾಡುತ್ತಿರುವುದಾಗಿ ಆರೋಪಗಳು ಕೇಳಿಬರುತ್ತಿವೆ. ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗಳು ಸರ್ಕಾರದ ಮಾರ್ಗಸೂಚಿಯಂತೆ ಮೆರಿಟ್ ಆಧಾರದ ಆಯ್ಕೆ ಮಾಡಲಾಗುತ್ತಿದ್ದು ಈ ಹುದ್ದೆಗಳಿಗೆ ಹಣ ಕೇಳುವುದಾಗಲಿ ಪಡೆಯುವುದಾಗಲಿ ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಯಾರೂ ಇಂಥ ಕೃತ್ಯಗಳಲ್ಲಿ ಭಾಗಿಯಾಗಬಾರದು ಹಾಗೂ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬಾರದು.
> ಎಂ.ರಮೇಶ,ಜಿಲ್ಲಾ ನಿರೂಪಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ