ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ತಡೆಯಲು ಪ್ಲಾಸ್ಟಿಕ್ ತಪಾಸಣಾ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಜರಾಯಿ ಇಲಾಖೆಗೆ ಬರುವ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿ ಈಗಾಗಲೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ವಸ್ತುಗಳ ತಪಾಸಣೆಗೆ ಚೆಕ್‌ಪೋಸ್ಟ್ ಮಾದರಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಚಿಂತಿಸಲಾಗಿದೆ.
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿದ ವಿವರಗಳು, ವಶಕ್ಕೆ ಪಡೆದ ಪ್ಲಾಸ್ಟಿಕ್‌ವಸ್ತುಗಳು, ನಿಷೇಧ ಆದೇಶ ಉಲ್ಲಂಘಿಸಿರುವ ಪ್ರಕರಣಗಳ ಮಾಹಿತಿಯನ್ನು ಪ್ರತಿ ತಿಂಗಳು ಆಯಾ ಗ್ರಾಮ ಪಂಚಾಯತಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಲುಪಿಸಬೇಕು ಎಂಬ ಸೂಚನೆ ನೀಡಲಾಗಿದೆ. ಇದರೊಂದಿಗೆ ತಪಾಸಣಾ ಕೇಂದ್ರಗಳ ಕಾರ್ಯವೈಖರಿಯ ಉಸ್ತುವಾರಿಯನ್ನು ಆಯಾ ತಾಲೂಕಿನ ತಾಪಂ ಇಒಗಳು ನಿರ್ವಹಿಸಬೇಕು ಎಂದು ತಿಳಿಸಲಾಗಿದ್ದು, ಪ್ಲಾಸ್ಟಿಕ್ ನಿಷೇಧ ಎಂಬುದು ಕೇವಲ ಆದೇಶಕ್ಕೆ ಸೀಮಿತವಾದಗೆ ಪರಿಣಾಮಗಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂಬುದು ಜಿಲ್ಲಾಡಳಿತದ ಅಶಯವಾಗಿದೆ.
ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ, ನೆಲಮಂಗಲದ ಶಿವಗಂಗೆ ಬೆಟ್ಟ, ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ದೇವಾಲಯ, ಬೈಲಾಂಜಿನೇಯಸ್ವಾಮಿ ದೇವಾಲಯ, ಬೈರಶೆಟ್ಟಿ, ದೇವರಹೊಸಹಳ್ಳಿ ವೀರಭದ್ರಸ್ವಾಮಿ ದೇವಾಲಯ, ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಕೋಡಗುರ್ಕಿ ಕತ್ತಿ ಮಾರಮ್ಮ ದೇವಾಲಯ, ಟೀ ಬೇಗೂರು ಕರಿ ತಿಮ್ಮರಾಯ ಸ್ವಾಮಿ ದೇಗುಲ, ವೆಂಕಟರಮಣ ಸ್ವಾಮಿ, ಹೊಸಕೋಟೆ ಅವಿಮುಕೇಶ್ವರಸ್ವಾಮಿ, ಶನಿಮಹಾತ್ಮ ದೇಗುಲ, ಚಿಕ್ಕಮಧುರೆ, ದೇವನಹಳ್ಳಿ ಕೋಟೆ ವೇಣುಗೋಪಾಲಸ್ವಾಮಿ, ವೀರಭದ್ರಸ್ವಾಮಿ ದೇಗುಲ, ನೆಲಮಂಗಲ ಮಹಿಮಾ ರಂಗನಾಥಸ್ವಾಮಿ ದೇಗುಲ.
ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅಥವಾ ಮಾರಾಟ ಕಂಡುಬಂದರೆ ಕಾನೂನು ಕ್ರಮಕ್ಕೂ ಚಿಂತಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಸಾರ್ವಜನಿಕರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ವ್ಯಾಪಾರಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರೆದಿದೆ ಇದರ ನಡುವೆ ಕಾನೂನು ಕ್ರಮ ಎದುರಿಸುವ ಎಚ್ಚರಿಕೆಯನ್ನು ರವಾನಿಸಿದೆ.
ಪೂಜಾ ಸಾಮಗ್ರಿಗಳ ತರಲು ಬಳಕೆ:
ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಹೂ, ಕಣ್ಣು ಕಡ್ಡಿಕರ್ಪೂರ ತರಲು ಪ್ಲಾಸ್ಟಿಕ್‌ಚೀಲಗಳನ್ನು ಬಳಸುತ್ತಾರೆ. ಅಂಗಡಿಯವರೂ ಸಹ ಪ್ಲಾಸ್ಟಿಕ್ ಕೈಚೀಲದಲ್ಲಿಯೇ ಪೂಜಾಸಾಮಾಗ್ರಿಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಪೂಜಾ ಕೆಲಸ ಮುಗಿದ ನಂತರ ಅವುಗಳನ್ನು ಅವರಣದಲ್ಲಿ ಎಲ್ಲಿಯಾದರೂ ಎಸೆದು ಹೋಗುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ದೇಗುಗಳ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡುಬರುತ್ತದೆ. ಆದ್ದರಿಂದ ಇದನ್ನೂ ಮೂಲದಲ್ಲಿಯೇ ಕಡಿವಾಣ ಹಾಕುವುದು ತಪಾಸಣಾ ಕೇಂದ್ರಗಳ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ, ಮಾರಾಟ, ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ರಚನೆಯಾಗಿದೆ. ಈ ತಂಡದ ಸಿಬ್ಬಂದಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕಡೆ ಇರುವ ದೇವಾಲಯ ಮತ್ತು ಇತರೆ ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ದೇವಾಲಯದ ಆವರಣ, ಚೆಕ್‌ಪೋಸ್ಟ್ ಪ್ರವೇಶ ದ್ವಾರ ಸೇರಿ ಸಾರ್ವಜನಿಕರಿಗೆ ಕಾಣುವಂಥ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ ಪ್ರಕಟಣೆಗಳನ್ನು ಅಳವಡಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲ್ಗಳು, ಏಕ ಬಳಿಕೆ ಕುಡಿಯುವ ನೀರಿನ ಪ್ಲಾಸ್ಟಿಕ್ ಲೋಟ ಅಥವಾ ಬಾಟೆಲ್‌ಗಳು, ತಟ್ಟೆ, ಚಮಚ ಸೇರಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಿಬ್ಬಂದಿ ಪರಿಶೀಲಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಜಿಲ್ಲೆಯ ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿ ಥರ್ಮಕೋಲ್, ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಪಾಸಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಪರಿಸರ ಪ್ರಜ್ಞೆಬೆಳೆಸಿಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕು
ಪ್ಲಾಸ್ಟಿಕ್ ಬದಲು ಬಟ್ಟೆ ಕೈಚೀಗಳನ್ನು ಬಳಸಲು ಮುಂದಾಗಬೇಕು.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ