ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿಶ್ವ ಪರಿಸರ ದಿನದ ಅಂಗವಾಗಿ ವಿಜಯವಾಣಿ ಹಾಗೂ ಶ್ರೀ ರಾಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕಾಡನೂರು ಕೈಮರ ಗ್ರಾಮದ ಶ್ರೀರಾಮ ಶಾಲೆ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಪರಿಸರ ಕುರಿತಾದ ಚಿತ್ರಗಳನ್ನು ಬಿಡಿಸಿದರು. ಮಾನವ ಕುಲದ ಉಜ್ವಲ ಭವಿಷ್ಯ ಹಾಗೂ ಹವಾಮಾನ ಸಂರಕ್ಷಣೆ ದೃಷ್ಟಿಯಿಂದ ಪ್ರಕೃತಿಯಿಂದ ಹೇಗೆ ಸ್ಫೂರ್ತಿ ಪಡೆಯಬಹುದು ಎಂಬ ಪರಿಕಲ್ಪನೆಯಡಿ ನೀಡಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇಸ್ತೂರಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಚಂದ್ರಮೋಹನ್ ಶಾಲೆ, ಯೂನಿವರ್ಸಲ್ ಪಬ್ಲಿಕ್ ಸ್ಕೂಲ್ ಹಾಗೂ ಕಾಡನೂರು ಕೈಮರದ ಶ್ರೀ ರಾಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಚಿತ್ರಕಲಾ ಸ್ಪರ್ಧೆಗೆ 1 ಗಂಟೆ ಕಾಲಾವಧಿ ನಿಗದಿ ಮಾಡಲಾಗಿತ್ತು. ವಿದ್ಯಾರ್ಥಿಗಳು 1 ಗಂಟೆಯ ಕಾಲಾವಧಿಯಲ್ಲಿ ಅವರ ಕಲ್ಪನೆಯ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು. ಒಂದಕ್ಕಿಂತ ಒಂದು ಅದ್ಬುತ ಕಲಾಕೃತಿಗಳನ್ನು ಚಿತ್ರಿಸಿದ ವಿದ್ಯಾರ್ಥಿಗಳ ಕಲೆಗೆ ತೀರ್ಪುಗಾರರು ತಲೆದೂಗಿದರು. ಬಹುಮಾನ ನೀಡಲು ಸ್ಥಾನಗಳನ್ನು ಆಯ್ಕೆ ಮಾಡುವುದು ತೀರ್ಪುಗಾರರಿಗೇ ಸವಾಲಿನಂತಿತ್ತು. ಅಷ್ಟು ಅದ್ಬುತ ಚಿತ್ರಕಲೆಗಳು ವಿದ್ಯಾರ್ಥಿಗಳ ಕುಂಚಗಳಿಂದ ಮೂಡಿಬಂದಿದ್ದವು. ಅಂತಿಮವಾಗಿ ಅಳೆದೂ ತೂಗಿ ಮೂವರ ಚಿತ್ರಗಳು ಬಹುಮಾನಕ್ಕೆ ಆಯ್ಕೆಯಾದವು. ಪ್ರಥಮ ಬಹುಮಾನ 3 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 2 ಸಾವಿರ ರೂ. ಹಾಗೂ ತೃತೀಯ ಬಹುಮಾನ 1 ಸಾವಿರ ರೂ. ನಗದು ವಿತರಿಸಲಾಯಿತು. ಇದರೊಂದಿಗೆ ಎರಡು ಸಮಾಧಾನಕರ ಬಹುಮಾನ ನೀಡಿ ತಲಾ 500 ರೂ. ನೀಡಲಾಯಿತು. ವಿದ್ಯಾರ್ಥಿಗಳಿಗೆ ವಿಜಯವಾಣಿ ಕಡೆಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಬಹುಮಾನ ವಿಜೇತರಿಗೆ ಗಣ್ಯರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಪರಿಸರ ದಿನಕ್ಕೆ ಪ್ರಕೃತಿ ಸಾಥ್:
ಶನಿವಾರ ಮೋಡಮುಸುಕಿದ ತಣ್ಣನೆ ವಾತಾವರಣ ಪರಿಸರ ದಿನಕ್ಕೆ ಪ್ರಕೃತಿಯೇ ಸಾಥ್ ನೀಡಿದಂತಿತ್ತು. ಶಾಲೆಯ ಆಟದ ಮೈದಾನದಲ್ಲಿ ಮರಗಳ ನೆರಳಿನಲ್ಲಿ ಕುಳಿತು ತದೇಕಚಿತ್ತದಿಂದ ಮಕ್ಕಳು ಚಿತ್ರಬಿಡಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು. ಗ್ರಾಮೀಣ ಪ್ರದೇಶದ ನಿರ್ಮಲ ಪರಿಸರ ಈ ಪರಿಸರ ದಿನಾಚರಣೆಗೆ ಒಂದಕ್ಕೊಂದು ಹೊಂದಾಣಿಕೆಯಂತೆ ಕಂಡುಬಂತು. ಚಿತ್ರಕಲಾ ಸ್ಫರ್ಧೆ ಮುಗಿಯುತ್ತಿದ್ದಂತೆ ನಿಶ್ಯಬ್ದವಾಗಿ ಕುಳಿತಿದ್ದ ವಿದ್ಯಾರ್ಥಿಗಳು ಒಮ್ಮೆಲೆ ಹರ್ಷದ ಭಾವನೆಯಿಂದ ಮೇಲೆದ್ದು ಕರತಾಡನ ಮಾಡಿದ್ದು ವಿಶೇಷವಾಗಿತ್ತು.
ಭಿತ್ತಿ ಪತ್ರಗಳಲ್ಲಿ ಪರಿಸರ ಜಾಗೃತಿ:
ಉಸಿರಿಗಾಗಿ ಪರಿಸರ ರಕ್ಷಿಸೋಣ, ಸೇವ್ ದಿ ಅರ್ಥ್, ಮಾಲಿನ್ಯ ತಡೆಯಿರಿ ಪರಿಸರ ರಕ್ಷಿಸಿ, ಪರಿಸರ ನಾಶ ಮನುಕುಲದ ಸರ್ವನಾಶ... ಹೀಗೆ ಪರಿಸರ ಜಾಗೃತಿ ಮೂಡಿಸುವ ಬರಹರಗಳ ಭಿತ್ತಿಪತ್ರ ಪ್ರದರ್ಶಿಸಿದ ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾ ನಡೆಸಿದರು.
ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಹಮ್ಮಿಕೊಂಡಿದ್ದ ಚಿತ್ರ ಕಲಾ ಸ್ಫರ್ಧೆ ಶ್ಲಾಘನೀಯವಾಗಿದೆ. ಹವಾಮಾನ ರಕ್ಷಣೆಯಲ್ಲಿ ಮಾನವ ಕುಲದ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಸ್ವಾಗತಾರ್ಹವಾಗಿದೆ. ಇಂಥ ಪ್ರಯತ್ನಗಳು ಮತ್ತಷ್ಟು ಹೆಚ್ಚಬೇಕು.
ಗೋಪಾಲ್ ಕೃಷ್ಣ, ಶ್ರೀರಾಮಶಾಲೆ ಸಂಸ್ಥಾಪಕ
ಪರಿಸರ ದಿನ ಎನ್ನುವುದು ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಈ ಕಾರ್ಯಕ್ರಮ ವರ್ಷಪೂರ್ತಿ ನಡೆಯಬೇಕೆನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ವಿಜಯವಾಣಿ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತಸ ತಂದಿದೆ.
ವಿನಯ್, ಮುಖ್ಯಶಿಕ್ಷಕ ಶ್ರೀರಾಮ ಶಾಲೆ
ಒಂದು ಸಸಿ ಸಾವಿರ ಜನರ ಉಸಿರಾಟ
ಒಂದು ಸಸಿ ನೆಟ್ಟು ಪೋಷಿಸಿದರೆ ಅದು ಸಾವಿರಾರು ಜನರ ಉಸಿರಿಗೆ ಸಹಕಾರಿಯಾಗುತ್ತದೆ ಎಂದು ಶ್ರೀ ರಾಮ ಶಾಲೆ ಕನ್ನಡ ಶಿಕ್ಷಕ ಜಗದೀಶ್ ಹೇಳಿದರು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಇದಕ್ಕೆ ನಾವೆಲ್ಲರೂ ಬದ್ಧರಾಗಿರೋಣ ಎಂದು ಕರೆ ನೀಡಿದರು.
ವಿಜ್ಞಾನ ಶಿಕ್ಷಕ ವೇಣುಗೋಪಾಲ್ ಮಾತನಾಡಿ, ಪರಿಸರ ಉಳಿಸೋಣ, ಹಸಿರೇ ಉಸಿರು. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಥಮ ಸ್ಥಾನವನ್ನು ಶ್ರೀರಾಮ ಶಾಲೆಯ ಆರ್. ನಿತೀನ್, ದ್ವಿತೀಯ ಸ್ಥಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಶಾಲೆಯ ಎನ್.ಕವನಾ, ತೃತೀಯ ಸ್ಥಾನವನ್ನು ಶ್ರೀರಾಮ ಶಾಲೆಯ ಜೆ.ಸಮೀತಾಗೌಡ ಪಡೆದರು. ಸಮಾಧಾನಕರ ಬಹುಮಾನ ಯೂನಿವರ್ಸಲ್ ಪಬ್ಲಿಕ್ ಶಾಲೆಯ ಎಂ.ಕೌಶಿಕ್, ಶ್ರೀರಾಮ ಶಾಲೆಯ ಬಿಶಾಲ್ಗೆ ಒಲಿಯಿತು.
ಸಮಾಧಾನಕರ-ಎಂ.ಕೌಶಿಕ್,ಬಿಶಾಲ್
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕಾಡನೂರು ಕೈಮರ ಗ್ರಾಮದ ಶ್ರೀರಾಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಲಾಯಿತು. ಶ್ರೀ ರಾಮ ಶಾಲೆ ಕಾರ್ಯದರ್ಶಿ ಲಕ್ಷ್ಮೀ ದೇವಿ, ವಿಜಯವಾಣಿ ಪ್ರಸರಣ ವಿಭಾಗದ ಮುಖ್ಯಸ್ಥ ವಿದ್ಯಾಧರ್, ಮುನಿಸ್ವಾಮಿರೆಡ್ಡಿ, ಮಹೇಶ್, ಪ್ರಶಾಂತ್ ಸುಮಂತ್, ವಿಜಯವಾಣಿ ಹಿರಿಯ ವರದಿಗಾರ ಎಂ.ಶಿವರಾಜ, ದೊಡ್ಡಬಳ್ಳಾಪುರ ತಾಲೂಕು ವರದಿಗಾರ ವೆಂಕಟರಾಜು ಇದ್ದರು.