online attendnce 
ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪುಸ್ತಕಕ್ಕೆ ಗುಡ್‌ಬೈ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದ ಬೆನ್ನಲ್ಲೆ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹಾಜರಾತಿಯನ್ನೂ ಆನ್‌ಲೈನ್ ವ್ಯಾಪ್ತಿಗೆ ತರಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ನಿತ್ಯ ಹಾಜರಾತಿಗೆ ಮುಖಚರ್ಯೆ ಆಧರಿತ ಆ್ಯಪ್ ಸಿದ್ದಗೊಳಿಸಿದ್ದು, ಹಳೆ ಹಾಜರಾತಿ ಪುಸ್ತಕಗಳ ಜಾಗಕ್ಕೆ ಆನ್‌ಲೈನ್ ಹಾಜರಾತಿ ಪ್ರಕ್ರಿಯೆ ಕಾಲಿಡುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಹಾಜರಾತಿ ಆರಂಭಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಶಾಲೆಯ ಶಿಕ್ಷಕರಿಗೆ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೂ ಹಾಜರಾತಿಗಾಗಿ ಎಐನ ನೂತನ ತಂತ್ರಜ್ಞಾನ ಆಧರಿತ ಹಾಜರಾತಿ ಅನುಷ್ಠಾನಗೊಳಿಸಲಾಗಿದೆ. 2026-27ನೇ ಸಾಲಿನಿಂದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನಿರಂತರ ಆ್ಯಪ್ ಮೂಲಕ ಹಾಜರಾತಿ ಪಡೆಯಬೇಕೆಂದು ಇಲಾಖೆ ಸೂಚಿಸಿದೆ.
ಶೇ.70 ವಿದ್ಯಾರ್ಥಿಗಳು ನೋಂದಣಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರಂತರ ಆ್ಯಪ್ ಮೂಲಕ ಹಾಜರಾತಿ ಹಾಕಲು ಮಕ್ಕಳನ್ನು ಈ ತಂತ್ರಾಂಶದಡಿಯಲ್ಲಿ ನೋಂದಾಯಿಸಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಶೇ.70 ವಿದ್ಯಾರ್ಥಿಗಳನ್ನು ಆ್ಯಪ್‌ನಲ್ಲಿ ನೋಂದಾಯಿಸಲಾಗಿದ್ದು, ಶೇ.30 ಮಕ್ಕಳನ್ನು ನೋಂದಾಯಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರಂತರದ ಕೆಲಸವೇನು? ಎಲ್ಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ನಿರಂತರ ಆ್ಯಪ್ ಒದಗಿಸಲಾಗಿದ್ದು, ಆಯಾ ತರಗತಿಯ ಶಿಕ್ಷಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊದಲು ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಬಳಿಕ, ಆಯಾ ತರಗತಿಯ ಪ್ರತಿ ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಮುಂದಿನಿಂದ ಮೂರು ವಿಧವಾಗಿ ಆ್ಯಪ್‌ನಲ್ಲಿ ಸೆರೆಹಿಡಿದು ನೋಂದಣಿ ಮಾಡಿಕೊಳ್ಳಬೇಕು. ಶಿಕ್ಷಕರು ಆಯಾ ತರಗತಿಯಲ್ಲಿನ ಎಲ್ಲ ಮಕ್ಕಳ ಭಾವಚಿತ್ರವನ್ನು ಆ್ಯಪ್‌ನಲ್ಲಿ ಸೆರೆ ಹಿಡಿಯುತ್ತಿದ್ದಂತೆ, ಎಐ ತಂತ್ರಜ್ಞಾನ ಮೂಲಕ ಆಯಾ ಮಕ್ಕಳ ಮುಖ ಗುರುತಿಸಿ ಹಾಜರಾತಿ ಯನ್ನು ಇಲಾಖೆಯ ತಂತ್ರಾಂಶಕ್ಕೆ ಸೇರುವ ಮೂಲಕ ಹಾಜರಾತಿ ಪರಿಗಣಿಸುತ್ತದೆ.
ಶಿಕ್ಷಕರಿಗೆ ನಿರಂತರ ತರಬೇತಿ: ನಿರಂತರ ಆ್ಯಪ್ ಮೂಲಕ ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ಜಿಲ್ಲ ಮಟ್ಟದಲ್ಲಿ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ತಾಲೂಕು ಮಟ್ಟದಲ್ಲಿ ಸಿಆರ್‌ಪಿಗಳಿಗೆ, ಸಿಆರ್‌ಪಿಗಳ ಮೂಲಕ ಶಾಲಾ ಮುಖ್ಯಶಿಕ್ಷಕರಿಗೆ ಆ್ಯಪ್ ಬಳಕೆಗೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶಾಲಾ ಹಂತದಲ್ಲಿ ಮುಖ್ಯಶಿಕ್ಷಕರು ಶಾಲಾ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಿ ಎಲ್ಲ ಮಕ್ಕಳ ಹಾಜರಾತಿಯನ್ನು ನಿರಂತರ ಆ್ಯಪ್ ಮೂಲಕವೇ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
ವಿದ್ಯಾರ್ಥಿಗಳಿಗೂ ಹಾಜರಾತಿಗಾಗಿ ನೂತನ ತಂತ್ರಜ್ಞಾನ ಆಧಾರಿತ ಎಐ ಹಾಜರಾತಿ ಮೊರೆ ಹೋಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಆ್ಯಪ್ ಅಳವಡಿಸಿಕೊಳ್ಳಲಿದ್ದು, ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕಲಾಗುತ್ತದೆ. ಇದರ ಮೂಲಕ ಪುಸ್ತಕ ಸಾಲಿನ ಪ್ರವೇಶಾತಿ ನಡುವೆಯೂ ವಿದ್ಯಾರ್ಥಿಗಳ ಮುಖಚರ್ಯೆಯೊಂದಿಗೆ ಹಾಜರಾತಿ ಪಡೆಯಲು ನೋಂದಣಿ ಕಾರ್ಯ ಬರದಿಂದ ಸಾಗಿದೆ.
ಆ್ಯಪ್‌ನ ಪ್ರಮುಖ ಪ್ರಯೋಜನಗಳೇನು?
* ವಿದ್ಯಾರ್ಥಿಗಳ ಹಾಜರಾತಿ ದಾಖಲಿಸುವ ಸಮಯ ಉಳಿತಾಯ
* ಹಾಜರಾತಿ ಮಾಹಿತಿಯ ನಿಖರ ದಾಖಲೆ
* ಡಿಜಿಟಲ್ ದಾಖಲೆ ನಿರ್ವಹಣೆ ಸಾಧ್ಯ
* ಶಾಲಾ ಆಡಳಿತಕ್ಕೆ ಸುಲಭ ಮೇಲ್ವಿಚಾರಣೆ
* ಶಿಕ್ಷಕರ ಕತ್ಯರ್ವದ ಒತ್ತಡ ಕಡಿತ
* ಹಾಜರಾತಿ ಪ್ರಕ್ರಿಯೆ ಸುಲಭ, ವೇಗ ಹಾಗೂ ನಿಖರ
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಿರಂತರ ಆ್ಯಪ್ ಪರಿಚಯಿಸಿದ್ದು, ಈ ಆ್ಯಪ್ ಮೂಲಕ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಾಜರಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ಯೋಜನೆ ಆನುಷ್ಠಾನಗೊಳಿಸಿದ್ದು, ಮಕ್ಕಳ ನೋಂದಣಿ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಬೈಲಾಂಜಿನಪ್ಪ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ