onion price 
ಬೆಂಗಳೂರು ಗ್ರಾಮಾಂತರ

ಕಣ್ಣೀರು ತರಿಸುತ್ತಿದೆ ಈರುಳ್ಳಿ, ಕೈಗೆಟಕುತ್ತಿಲ್ಲ ಬೆಳ್ಳುಳ್ಳಿ!

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕಳೆದ ಕೆಲವು ತಿಂಗಳುಗಳಿಂದ ಸಾಮಾನ್ಯ ದರದಲ್ಲಿದ್ದ ಈರುಳ್ಳಿ ಹಾಗೂ ಬೆಳ್ಳುಳ್ಳಿ ದರಗಳು ಜಿಲ್ಲೆಯಲ್ಲಿ ದಿಢೀರ್​ ಗಗನಮುಖಿಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಜನರ ಪಾಲಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದ್ದರೆ ಬೆಳ್ಳುಳ್ಳಿ ಕೈಗೆಟುಕದಂತಾಗಿದೆ.
ಕಳೆದೊಂದು ವರ್ಷದಿಂದ ಈರುಳ್ಳಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಕೆಜಿಗೆ 25 ರಿಂದ 30ರೂ ಆಸುಪಾಸಿನಲ್ಲಿಯೇ ದರ ಕಾಯ್ದುಕೊಂಡಿತ್ತು. ಆದರೆ ಕಳೆದೊಂದು ವಾರದಿಂದೀಚೆಗೆ ದಿಢೀರ್​ ಏರಿಕೆ ಕಂಡುಬಂದಿದ್ದು ಕೆಜಿಗೆ 60 ರೂ. ಗುಣಮಟ್ಟದ ಈರುಳ್ಳಿ 70 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಶುಭಸಮಾರಂಭಗಳೂ ಕಾರಣ:
ಸಾಮಾನ್ಯವಾಗಿ ಆಘಾಡ ಮಾಸದಲ್ಲಿ ಶುಭಸಭಾರಂಭಗಳು ನಡೆಯದ ಕಾರಣ ಅಗತ್ಯ ವಸ್ತುಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು. ಶ್ರಾವಣ ಅರಂಭವಾಗಿ ಶುಭಸಮಾರಂಭಗಳು ಆರಂಭವಾಗುತ್ತಿದ್ದಂತೆ ತರಕಾರಿ ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದೆ ಇದರ ಮಧ್ಯೆ ಪ್ರತಿನಿತ್ಯ ಅತ್ಯಗತ್ಯವಾಗಿ ಬಳಕೆಯಾಗುವ ಈರುಳ್ಳಿ ಹಾಗೂ ಬೆಳ್ಳುಳ್ಳಿ ದರಗಳು ದಿಢೀರ್​ ಏರಿಕೆ ಕಂಡುಬಂದಿದೆ. ಸಾಲು ಸಾಲು ಹಬ್ಬಗಳ ಆಗಮದ ಹಿನ್ನೆಲೆಯಲ್ಲಿ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಮಳೆಯ ಜೂಜಾಟ:
ಹೆಚ್ಚಾಗಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ಬೆಳೆ ಕೊಳೆತು ಇಳುವರಿ ಕುಸಿದ ಕಂಡಿದೆ, ಇದರಿಂದ ಮಾರುಕಟ್ಟೆಗೆ ರಪ್ತಾಗುವ ಈರುಳ್ಳಿ ರಾಶಿಯಲ್ಲಿ ಕೊರತೆ ಎದುರಾಗಿದೆ. ಇನ್ನು ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ನಡೆಯದೇ ಇರುವುದರಿಂದ ಉತ್ಪಾದನೆ ಕುಂಠಿತವಾಗಿ ಬೇಡಿಕೆ ಹೆಚ್ಚಾಗಿದೆ ಇದರಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ದರಗಳಲ್ಲಿ ಏರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. 200 ರೂಪಾಯಿ ಆಸುಪಾಸಿನಲ್ಲಿದ್ದ ಕೆಜಿ ಬೆಳ್ಳುಳ್ಳಿ ಇದೀಗ 300 ರೂಪಾಯಿ ಗಡಿ ದಾಟಿದೆ. ಭೂಮಿಯೊಳಗೆ ಬೆಳೆಯಲಾಗುವ ಗಡ್ಡೆ ಜಾತಿಯ ತರಕಾರಿಗಳು ಮಳೆಯ ಹಾನಿ ಹಾಗೂ ಉತ್ತಮ ವಾತಾವರಣದ ಕೊರತೆಯಿಂದ ಕೊಳೆಯುತ್ತಿದ್ದು ಇದರಿಂದ ಪೂರೈಕೆ ಕಡಿಮೆಯಾಗಿದೆ, ದರವು ಕೂಡ ಏರಿಕೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.