One-day workshop 
ಬೆಂಗಳೂರು ಗ್ರಾಮಾಂತರ

ಎಲ್ಲರ ಸಹಕಾರದಿಂದ ಜೀತ ನಿರ್ಮೂಲನೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜೀತ ಪದ್ದತಿಯಂತಹ ಸಾಮಾಜಿಕ ಪಿಡುಗು ಕೆಲವು ಭಾಗಗಳಲ್ಲಿ ಇಂದಿಗೂ ಜೀವಂತವಾಗಿದೆ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮನ್ವಯತೆಯಿಂದ ಜೀತ ಪದ್ದತಿ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಹಿಂದೆ ಜೀತ ಪದ್ಧತಿಯು ಹೆಚ್ಚಾಗಿ ಕಂಡುಬರುತ್ತಿತ್ತು, ಕಾಲಾ ಕ್ರಮೇಣ ಕಡಿಮೆ ಆಗುತ್ತಿದೆ. ಆದರೂ ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದಾಗಿ ಇಂದಿಗೂ ಜೀತ ಪದ್ಧತಿ ವ್ಯವಸ್ಥೆ ಜೀವಂತವಾಗಿದೆ, ಸಾರ್ವಜನಿಕರು ಜಾಗೃತರಾಗಬೇಕು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಸಹಕಾರದಿಂದ ಸಾಧ್ಯ ಎಂದು ಪುನರುಚ್ಚರಿಸಿದರು.
ಕಾನೂನು ಕ್ರಮ ಜರುಗಿಸಬೇಕು:
ಶಿಕ್ಷಣ,ಕಾನೂನು, ಜಾಗೃತಿ, ಸಮಾನತೆಯಿಂದ ಜೀತ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ಜೀತ ಪದ್ಧತಿಯ ನಿರ್ಮೂಲನೆಗೆ ವಿವಿಧ ಇಲಾಖೆಗಳು, ಸ್ವಯಂ ಸೇವಕ ಸಂಘಗಳು, ಸಮುದಾಯಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜೀತ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಎಡಿಸಿ ಹೇಳಿದರು. ಜಿಲ್ಲೆಯಲ್ಲಿ ಎಲ್ಲಾದರೂ ಜೀತ ಪದ್ಧತಿ ವ್ಯವಸ್ಥೆ ಕಂಡುಬಂದಲ್ಲಿ ಅಥವಾ ಬಲವಂತವಾಗಿ ದುಡಿಸಿಕೊಳ್ಳುವ ಪರಿಸ್ಥಿತಿ ಕಂಡು ಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು. ಶಾಶ್ವತ ಪುನರ್ವಸತಿ ಕಲ್ಪಿಸುವ ಸಂಬಂಧ ಜೀತ ವಿಮುಕ್ತರಿಗೆ ಎಕರೆ ಭೂಮಿಯನ್ನು ಉಚಿತವಾಗಿ ನೀಡಲು ಕೋರಿ ಜಿಲ್ಲಾಧಿಕಾರಿ ಪತ್ರ ಬರೆಯಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ (ಫಲಾನುಭವಿ ಆಧಾರಿತ) ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
157 ಜೀತದಾಳುಗಳಿಗೆ ಪುನರ್ವಸತಿ:
ಜಿಲ್ಲೆಯನ್ನು 2020 ರಲ್ಲಿ ಜೀತ ಮುಕ್ತ ಎಂದು ಘೋಷಿಸಲಾಗಿದ್ದು, 164 ಜೀತದಾಳುಗಳನ್ನು ವಿಮುಕ್ತಿಗೊಳಿಸಲಾಗಿದೆ, ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 157 ಜೀತ ದಾಳುಗಳಿಗೆ ತಲಾ 20 ಸಾವಿರ ರೂ.ಗಳಂತೆ 31.40 ಲಕ್ಷ ರೂ.ಗಳು ನೀಡಲಾಗಿದೆ. ಇಬ್ಬರಿಗೆ ನಿವೇಶನ ನೀಡಲಾಗಿದ್ದು, 43 ಜನರಿಗೆ ವಸತಿ ಒದಗಿಸಲಾಗಿದೆ. 54 ಜನರಿಗೆ ನರೇಗಾ ಜಾಬ್ ಕಾರ್ಡ್, 156 ಜನರಿಗೆ ಮತದಾನ ಗುರುತಿನ ಚೀಟಿ, 112 ಜನರಿಗೆ ಬ್ಯಾಂಕ್‌ಗಳಿಂದ ಸಾಲ ಧನಸಹಾಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಜ್ಞಾ ವಿಧಿ ಬೋಧನೆ:
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ ಕಿರಣ ಕಮಲಪ್ರಸಾದ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ (ರದ್ದತಿ) ಕಾಯ್ದೆ 1976 ಜೀತ ಪದ್ಧತಿ ವ್ಯಾಖ್ಯಾನ, ಜೀತ ಕಾರ್ಮಿಕ ಪದ್ದತಿಗೆ ಒತ್ತಾಯಿಸುವವರ ವಿರುದ್ಧ ಕಾಯ್ದೆಯಡಿ ನಿಗದಿಗೊಳಿಸಿರುವ ಕಾನೂನು ಶಿಕ್ಷೆ, ಜೀತ ವಿಮುಕ್ತರ ಪುನರ್ವಸತಿ ಯೋಜನೆ, ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ ಹಾಗೂ ಪುನರ್ವಸತಿ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾದರಿ ಕಾರ್ಯವಿಧಾನಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಜೀತ ಪದ್ಧತಿ ನಿರ್ಮೂಲನೆ ಪ್ರತಿಜ್ಞಾ ವಿಧಿ ಬೋಧಿಸಿದರು.