Notice to chicken shops 
ಬೆಂಗಳೂರು ಗ್ರಾಮಾಂತರ

ಕೋಳಿ ಅಂಗಡಿಗಳಿಗೆ ನೋಟಿಸ್

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ದೊಡ್ಡತುಮಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಳಿಮಾಂಸ ಮಾರಾಟ ಮಳಿಗೆಗಳು ಹಾಗೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಪಂಚಾಯಿತಿ ಅಧಿಕಾರಿಗಳು ಅಸಮರ್ಪಕ ತ್ಯಾಜ್ಯ ವಿಲೇವಾರಿ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ದೊಡ್ಡತುಮಕೂರು ಪಂಚಾಯಿತಿ ವ್ಯಾಪ್ತಿಯ ಕಾಡನೂರುಕೈಮರ ಸುತ್ತಮುತ್ತ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ದೊಡ್ಡಮಟ್ಟದಲ್ಲಿ ಪರಿಸರವನ್ನು ಹಾಳು ಮಾಡುತ್ತಿದೆ, ಕೋಳಿ ತ್ಯಾಜ್ಯದ ವಾಸನೆಗೆ ಸ್ಥಳೀಯರು ಹೈರಾಣಾಗಿದ್ದಾರೆ. ರಸ್ತೆ ಬದಿಗಳಲ್ಲಿ ಹಾಗೂ ಕೆರೆಅಂಗಳದಲ್ಲಿ ಟನ್‌ಗಟ್ಟಲೆ ಕೋಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪಂಚಾಯಿತಿಗೆ ದೂರು ನೀಡಿದ್ದರು. ಅಲ್ಲದೆ ಈ ಭಾಗದಲ್ಲಿನ ಹೋಟೆಲ್‌ಗಳಲ್ಲಿ ಪಾರ್ಸೆಲ್ ಮತ್ತಿತರ ವಿಷಯಗಳಲ್ಲಿ ಪ್ಲಾಸ್ಟಿಕ್ ಕೈಚೀಲ ಸೇರಿ ಯಥೇಚ್ಚವಾಗಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಪಂಚಾಯಿತಿ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಂಚಾಯಿತಿ ಅಧಿಕಾರಿಗಳು ದೊಡ್ಡತುಮಕೂರು ಪಂಚಾಯಿತಿ ವ್ಯಾಪ್ತಿಯ ದೊಡ್ಡಬಳ್ಳಾಪುರ-ನೆಲಮಂಗಲ ಮುಖ್ಯರಸ್ತೆಯಲ್ಲಿನ ಕೋಳಿ ಮಾಂಸ ಮಾರಾಟದ ಅಂಗಡಿಗಳು ಹಾಗೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅವೈಜ್ಞಾನಿಕ ಕಸ ವಿಲೇವಾರಿ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.
ಎರಡನೇ ಬಾರಿ ದಂಡ:
ಮೊದಲ ಬಾರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ, ಕೋಳಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿಯಮಬದ್ಧವಾಗಿ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ ಜತೆಗೆ ಹೋಟೆಲ್‌ಗಳಲ್ಲಿ ಬಳಸುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಜಪ್ತಿ ಮಾಡಿದ್ದು ಅವರಿಗೂ ಮೊದಲ ಬಾರಿಗೆ ನೋಟಿಸ್ ನೀಡಲಾಗಿದೆ. ಮತ್ತೆ ಪುನಾವರ್ತನೆಯಾದರೆ ದಂಡ ವಿಧಿಸಲಾಗುವುದು ಜತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ ಪರಿಣಾಮ:
ಕಾಡನೂರು ಕೈಮರಕ್ಕೆ ಕಸದ ಶಾಪ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯಲ್ಲಿನ ಕಾಡನೂರು ಕೈಮರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಕೋಳಿ ತ್ಯಾಜ್ಯ ಸುರಿಯುತ್ತಿರುವುದು ಹಾಗೂ ಹೋಟೆಲ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವ ಬಗ್ಗೆ ವಿಶೇಷ ವರದಿ ಮಾಡಲಾಗಿತ್ತು. ಇದನ್ನು ಗಮನಿಸಿದ ದೊಡ್ಡತುಮಕೂರು ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿ ಎಚ್ಚರಿಕೆ ರವಾನಿಸಿದ್ದಾರೆ.