ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೂತನ ವರ್ಷಾಚರಣೆಗೆ ಹಿನ್ನೆಲೆಯಲ್ಲಿಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಸೇರಿ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಸರ್ಪಗಾವಲು ಇರಲಿದ್ದು, ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ.
ವರ್ಷಾಚರಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸುವುದರ ಜತೆಗೆ ಮೋಜು ಮಸ್ತಿ ನೆಪದಲ್ಲಿ ಅಹಿತರ ಘಟನೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಕೆಲವೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದು ಕಳೆದ ನಾಲ್ಕೈದು ವರ್ಷಗಳ ಕಹಿಘಟನೆಗಳ ವರದಿ ಪಡೆದು ಇಂಥ ಘಟನೆಗಳು ಮರುಕಳಿಸಬಾರದೆಂಬ ಕಾರಣಕ್ಕೆ ಮುಂಜಾಗ್ರತೆ ವಹಿಸಿದೆ.
ಡಿ.31ರಿಂದ ಜ.1 ಮುಂಜಾನೆವರೆಗೆ ಖಾಕಿ ಪಡೆ:
ಡಿ.31 ರಿಂದ ಜ.1ರ ಮುಂಜಾನೆವರೆಗೆ ಜಿಲ್ಲೆಯ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಸಿಬ್ಬಂದಿ ವಿಶೇಷ ಕರ್ತವ್ಯ ನಿರ್ವಹಿಸಲಿದ್ದು, ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲಿದೆ. ಮುಖ್ಯವಾಗಿ ಮದ್ಯಪಾನ ಮಾಡಿ ವಾಹನ ಚಲಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ವಾಹನಗಳ ಜಪ್ತಿ ಜತೆಗೆ ಕಾನೂನು ಕ್ರಮ ಜರುಗಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ.ಬಾಬಾ ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷಾಚರಣೆ-2025 ರ ಸಂಬಂಧ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಾದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ಮಾಕಳಿದುರ್ಗ, ಆವತಿ ಬೆಟ್ಟ ಬೆಟ್ಟದ ತಪ್ಪಲು ಪ್ರದೇಶಗಳಿಗೆ 2024 ರ ಡಿ.31ರ ಸಂಜೆ 6 ಗಂಟೆಯಿಂದ 2025 ರ ಜ.1 ರ ಮುಂಜಾನೆವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ. ಪರಿಸ್ಥಿತಿ ಅವಲೋಕಿಸಿ ಇದನ್ನು ವಿಸ್ತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಜಿಲ್ಲೆಯಲ್ಲಿನ ಎಲ್ಲ ಮದ್ಯದಂಗಡಿಗಳು ಹಾಗೂ ರೆಸಾರ್ಟ್, ಹೋಂಸ್ಟೇಗಳಂಥ ಪ್ರದೇಶಗಳಲ್ಲಿ ವರ್ಷಾಚರಣೆಗೆ ಯಾವುದೇ ರೀತಿ ಅವಧಿ ವಿಸ್ತರಣೆಗೆ ಅವಕಾಶವಿಲ್ಲ. ಎಂದಿನ ದಿನಗಳಂತೆ ಯಥಾಸ್ಥಿತಿಯಲ್ಲಿ ಅವುಗಳು ಕಾರ್ಯನಿರ್ವಹಿಸಬೇಕು. ಎಂದಿನ ಕಾಲಾವಧಿಯಲ್ಲಿ ಅವುಗಳನ್ನು ಬಂದ್ ಮಾಡಬೇಕು, ಎಲ್ಲಿಯಾದರೂ ನಿಯಮ ಮೀರಿ ಕಾರ್ಯಚಟುವಟಿಕೆ ನಡೆಯುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳ ಟೋಲ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಲಿದೆ, ವರ್ಷಾಚರಣೆ ಮೋಜಿನಲ್ಲಿ ಟೋಲ್ ಕಟ್ಟದೆ ವಾಹನ ನುಗ್ಗಿಸುವುದು, ಟೋಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡುವುದು ಸೇರಿ ಇನ್ನಿತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಟೋಲ್‌ಗಳ ಬಳಿ ಗೃಹರಕ್ಷಕ ಸಿಬ್ಬಂದಿ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸಿದ್ದತೆ ನಡೆದಿದೆ.
ಬೈಕ್ ವ್ಹೀಲಿಂಗ್ ಬಗ್ಗೆ ನಿಗಾ:
ಬೈಕ್ ರೇಸ್, ವ್ಹೀಲಿಂಗ್ ಕ್ರೇಜ್ ಹೆಸರಲಿನಲ್ಲಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟು ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾ ಪೊಲೀಸರು ಹೆಚ್ಚಿನ ನಿಗಾ ವಹಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವ ಮೂಲಕ ಅತಿ ವೇಗ ಚಾಲನೆಗೆ ಕಡಿವಾಣ ಹಾಕುವುದು ಸೇರಿ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸರು ಸಜ್ಜಾಗಿದ್ದಾರೆ.
ಹೊಸ ವರ್ಷಾಚರಣೆ ಸಡಗರದ ನಡುವೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್ ಸಹಕಾರೊಂದಿಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವರ್ಷಾಚರಣೆ ಸಂಭ್ರಮ ಅವಘಡಗಳಿಗೆ ಎಡೆ ಮಾಡಿಕೊಡಬಾರದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತಿತರ ಅಹಿತರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ
ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಮುಖ್ಯವಾಗಿ ಹೆದ್ದಾರಿಗಳಲ್ಲಿ ವಾಹನ ಸವಾರರ ಮೇಲೆ ಕಣ್ಣಿಡಲಾಗುವುದು. ಡ್ರಿಂಗ್ ಡ್ರೈ ವಿರುದ್ಧ ಸ್ಲೇಷಲ್ ಡ್ರೈವ್ ಮಾಡಲಾಗುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಪಹರೆ ಇರಲಿದೆ. ಯಾರೂ ಕಾನೂನು ನಿಯಮ ಉಲ್ಲಂಸಬಾರದು.
ಸಿ.ಕೆ.ಬಾಬಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ