ಕೇಂದ್ರ ಮತ್ತು ರಾಜ್ಯ ಸರ್ಕಾರ 15ನೇ ಹಣಕಾಸು ವರ್ಷಕ್ಕೆ 39 ಲಕ್ಷ ರೂ. ಬಿಟ್ಟರೆ ಇನ್ನಿತರೆ ಯಾವುದೇ ವರವಾನ ಇಲ್ಲದೆ ಕೇವಲ ಸರ್ಕಾರಗಳ ಅನುದಾನದ ಮೇಲೆ ಅವಲಂಬಿತವಾತವಾಗಿರುವ ನಂದಗುಡಿ ಹೋಬಳಿ ನೆಲವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ನೆಲವಾಗಿಲು ಪಂಚಾಯಿತಿ ವ್ಯಾಪ್ತಿಗೆ 15 ಗ್ರಾಮಗಳು ಒಳಪಟ್ಟಿದ್ದು ಗ್ರಾಮ ಪಂಚಾಯಿತಿಯಲ್ಲಿ 19 ಸದಸ್ಯರ ಸಂಖ್ಯಾಬಲವಿದೆ, 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಂಚಾಯಿತಿಗೆ ವರ್ಷಕ್ಕೆ ಸರಾಸರಿ 19 ಲಕ್ಷ ರೂ.ತೆರಿಗೆ ಸಂಗ್ರಹ ಹೊರತುಪಡಿಸಿ ಇನ್ಯಾವುದೆ ಮೂಲವಿಲ್ಲ. ಇದರ ನಡುವೆ ಸರ್ಕಾರ ನೀಡಬೇಕಾಗಿದ್ದ 15ನೇ ಹಣಕಾಸು 2024-25 ಮತ್ತು 2025 -26 ಅನುದಾನ ಇದುವರೆಗೂ ಬಿಡುಗಡೆಯಾಗದಿರುವುದು ಅಧಿಕಾರಿಗಳಿಗೆ ತಲೆ ನೋವಾಗಿದೆ, ನೀರುಗಂಟಿಗಳಿಗೆ ವೇತನ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಪಂಪ್‌ಸೆಟ್ ಮತ್ತಿತರ ರಿಪೇರಿ ಕೆಲಸಗಳಿಗೂ ಹಣ ಒದಗಿಸುವುದು ಸವಾಲಿನ ಕೆಲಸವಾಗಿದೆ.
ಗ್ರಾಮಗಳ ಅಭಿವದ್ಧಿಯಲ್ಲಿ ಗ್ರಾಮ ಪಂಚಾಯಿತಿ ಪ್ರಮುಖ ಪಾತ್ರ ವಹಿಸುತ್ತದೆ, ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೇರ ಪಾತ್ರ ವಹಿಸುತ್ತದೆ ಆದರೆ ಚುನಾಯಿತ ಪ್ರತಿನಿಧಿಗಳ ಐದು ವರ್ಷದ ಅಧಿಕಾರವಧಿ ಮುಗಿದು 5 ತಿಂಗಳು ಕಳೆದರೂ ಸರ್ಕಾರ ಚುನಾವಣೆ ನಡೆಸದೆ ಅಡಳಿತಾಧಿಕಾರಿಗಳನ್ನು ಕೂರಿಸಿರುವುದು ಗ್ರಾಮಗಳಲ್ಲಿನ ಅಭಿವೃದ್ಧಿಗೆ ಕಂಟಕ ತಂದೊಡ್ಡಿದೆ. ಕಳೆದ 5 ವರ್ಷದಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದಿಲ್ಲ. ಈಗ ಗ್ರಾಮ ಪಂಚಾಯಿತಿ ಚುನಾವಣೆಗೂ ಸರ್ಕಾರ ಮೀನಮೇಷ ಏಣಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರಸ್ತೆ, ಸೋಲಾರ್ ಲೈಟ್ ಸೇರಿ ವಿವಿಧ ಮೂಲ ಸೌಲಭ್ಯಗಳ ಸಮಸ್ಯೆ ಎದುರಾಗಿದೆ, ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಗ್ರಾಮ ಪಂಚಾಯಿತಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸಲಾರದೆ ಕೈಕಟ್ಟಿ ಕೂರುವ ಸನ್ನಿವೇಶ ನಿರ್ಮಾಣವಾಗಿದೆ.
ಗ್ರಾಮಗಳಲ್ಲಿನ ಚರಂಡಿಯಲ್ಲಿ ಕಸ ತುಂಬಿ ತುಳುಕುತ್ತಿದೆ, ಸ್ವಚ್ಛತೆ ವಾಡುವವರಿಲ್ಲ, ಪಂಚಾಯಿತಿ ಸದಸ್ಯರನ್ನು ಕೇಳಿದರೆ ನಮ್ಮ ಅಧಿಕಾರ ಮುಗಿದಿದೆ, ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಅಲ್ಲಿ ಅಧಿಕಾರಿಗಳು ಸಿಗುವುದೇ ಇಲ್ಲ. ಇದರಿಂದ ಗ್ರಾಮಗಳಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ.
.ನ್ಯಾರಾಮ್ಮ .ಎತ್ತಿನೊಡೆಯಪುರ