national-farmers-day 
ಬೆಂಗಳೂರು ಗ್ರಾಮಾಂತರ

ಜಿಲ್ಲಾದ್ಯಂತ ಅನ್ನದಾತನಿಗೆ ನಮನ

ಜಿಲ್ಲಾದ್ಯಂತ ಬುಧವಾರ ರಾಷ್ಟ್ರೀಯ ರೈತರ ದಿನ ಆಚರಿಸಲಾಯಿತು. ನಾಲ್ಕೂ ತಾಲೂಕುಗಳ ಕೇಂದ್ರಸ್ಥಾನಗಳಲ್ಲಿ ಅನ್ನದಾತನ ಶ್ರಮ, ತ್ಯಾಗ, ಕೊಡುಗೆಗಳ ಗುಣಗಾನ ನಡೆಯಿತು. ಅನ್ನದಾತನಿಗೆ ನಮಿಸುವ ಮೂಲಕ ರೈತರ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ದೇವನಹಳ್ಳಿಯಲ್ಲಿ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ರೈತರ ಗೌರವವೇ ರಾಷ್ಟ್ರದ ಗೌರವ. ರೈತನೇ ರಾಷ್ಟ್ರದ ಬೆನ್ನೆಲುಬು ಎಂದು ಗುಣಗಾನ ಮಾಡುವ ಮೂಲಕ ರೈತರ ದಿನಕ್ಕೆ ಚಾಲನೆ ನೀಡಿದರು. ಮೇಳೆಕೋಟೆಯಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಹಿಳಾ ಆಯೋಗದ ನಾಗಲಕ್ಷ್ಮೀಚೌಧರಿ ಪಾಲ್ಗೊಂಡಿದ್ದರು.
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಂದಲೇ ನಮ್ಮ ಬದುಕು ಸಾಗುತ್ತಿದೆ. ಪ್ರಕೃತಿ ಸವಾಲುಗಳು, ಮಾರುಕಟ್ಟೆ ಅಸ್ಥಿರತೆಗಳ ನಡುವೆಯೂ ಅನ್ನದಾತರು ಸಮಾಜದ ಆಹಾರ ಭದ್ರತೆಯನ್ನು ಕಾಪಾಡುತ್ತಿದ್ದಾರೆ ಅವರ ಶ್ರಮವನ್ನು ನಾವು ಸದಾಕಾಲ ಸ್ಮರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ವತಿಯಿಂದ ದೇವನಹಳ್ಳಿ ತಾಲೂಕಿನಲ್ಲಿರುವ ದೇವರಾಜು ಅರಸು ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಷ್ಟೀಯ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ರೈತ ದಿನ, ಅನ್ನದಾತರ ಮಹತ್ವವನ್ನು ಸಾರುವ ದಿನ. ರೈತರ ಗೌರವವೇ ರಾಷ್ಟ್ರದ ಗೌರವ. ರೈತನೇ ರಾಷ್ಟ್ರದ ಬೆನ್ನೆಲುಬು ಎಂದು ಗುಣಗಾನ ಮಾಡಿದರು. ರೈತರ ಆತ್ಮಹತ್ಯೆಗಳು ಆಗಬಾರದೆಂದು ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಯಾವ ರೈತರೂ ಆತುರದಿಂದ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. ಚನ್ನರಾಯಪಟ್ಟಣದ ರೈತರ ಸಂಪೂರ್ಣ ಭೂಮಿಯನ್ನು ಮುಖ್ಯಮಂತ್ರಿಗಳು ಕೈ ಬಿಟ್ಟಿರುವುದು ಸಂತಸದ ವಿಷಯ ಎಂದು ಇದೇ ವೇಳೆ ಪುನರುಚ್ಚರಿಸಿದರು.
ರೈತರ ಪರ ಹಲವು ಯೋಜನೆಗಳಿವೆ:
ಬಮೂಲ್ ನಿರ್ದೇಶಕ ಎಸ್.ಪಿ.ಮುನಿರಾಜು ಮಾತನಾಡಿ, ರೈತರ ಪರವಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಈ ಯೋಜನೆಗಳಲ್ಲಿ ಮೇವು ಕತ್ತರಿಸುವ ಯಂತ್ರ ,ಹಸು ಸಾಕಾಣಿಕೆಗೆ ಸಬ್ಸಿಡಿಯಲ್ಲಿ ಧನಸಹಾಯ, ವಿದ್ಯಾವಂತ ಯುವ ರೈತರಿಗೆ ಯಾವುದೇ ಭೂಮಿ ಅಡ ಇಡದೇ ಧನಸಹಾಯ ಪಡೆಯಬಹುದು ಎಂದರು. ಕೆಐಡಿಬಿ ವಶವಾಗುತ್ತಿದ್ದ ರೈತರ ಭೂಮಿಯನ್ನು ಕಾಪಾಡುವಲ್ಲಿ ಸಚಿವರ ಶ್ರಮ ಅಗಾಧವಾಗಿದೆ, ಅವರು ರೈತರ ಹಿತ ಕಾಪಾಡುವಲ್ಲಿ ಸದಾಸಿದ್ಧ ಎಂದು ಹೇಳಿದರು.
ರೈತರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು, ಅವರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಚರ್ಚೆ ನಡೆಸುವುದು ಹಾಗೂ ಎತ್ತಿನ ಹೊಳೆ ಯೋಜನೆಯ ಪ್ರಸಕ್ತ ಕಾಮಗಾರಿ ಕುರಿತು ಸಚಿವರು ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ವತಿಯಿಂದ ಕೃಷಿಗೆ ಸಂಬಂಧಿತ ಮಾಹಿತಿ ನೀಡುವ ಮಳಿಗೆಗಳನ್ನು ಉದ್ಘಾಟಿಸಿ, ಜಿಲ್ಲೆಯ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ರಾಗಿ ಸೇವಿ ವಿವಿಧ ಧಾನ್ಯಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ಬಿಡಿಸಿದ ದೃಶ್ಯಗಳು ಗಮನ ಸೆಳೆದವು. ವೇದಿಕೆಯಲ್ಲಿನ ಗಣ್ಯರು ದವಸ ಧಾನ್ಯಗಳಿಗೆ ನಮಿಸುವ ಮೂಲಕ ರೈತರಿಗೆ ಗೌರವ ವಂದನೆ ಸಲ್ಲಿಸಿದರು.