ಎಸ್‌ಸಿ,ಎಸ್‌ಟಿ ಸಮುದಾಯಗಳ ಮನೆ ಬಾಗಿಲಿಗೆ 13 ಸೇವೆ
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಎಸ್‌ಎಸಿ,ಎಸ್‌ಟಿ ಸಮುದಾಯಗಳ ಮನೆ ಬಾಗಿಲಿಗೆ 13 ಸೇವೆಗಳನ್ನು ಒದಗಿಸುವ ‘ ನನ್ನ ಗುರುತು’ ಅಭಿಯಾನವನ್ನು ಜಿಲ್ಲಾ ಪಂಚಾಯಿತಿ ಆರಂಭಿಸಿದೆ.
ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಎಸ್‌ಸಿ,ಎಸ್‌ಟಿ ಸಮುದಾಯದವನ್ನು ಗುರುತಿಸಿ ಅವರಿಗೆ ಅಗತ್ಯ ಸೇವೆ ಒದಗಿಸುವತ್ತ ಗ್ರಾಪಂ ಸಿಬ್ಬಂದಿ ಮುಂದಾಗಿದ್ದಾರೆ. ಈ ಸಮುದಾಯದವರು ವಾಸವಾಗಿರುವ ಪ್ರದೇಶಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ತಾಯಿ ಸಮಿತಿ ಇದರ ಉಸ್ತುವಾರಿ ವಹಿಸಿಲಿದೆ. ಶಿಬಿರದಲ್ಲಿ ಫಲಾನುಭವಿಗಳ ಮೊಬೈಲ್ ನಲ್ಲಿಯೇ ಡಿಜಿ ಲಾಕರ್ ಆ್ಯಪ್‌ನಲಿ ದಾಖಲೆಗಳನ್ನು ಪಡೆಯಲು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಆ್ಯಪ್‌ನಲ್ಲಿ ಗಣಕೀಕರಣಗೊಳಿಸುವ ಮೂಲಕ ದಾಖಲೆಗಳನ್ನು ಸಂರಕ್ಷಿಸಲು ಕ್ರಮ ವಹಿಸಲಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸರ್ಕಾರದ ಸೌಲಭ್ಯ ಪಡೆಯಲು ಅವರ ಬಳಿ ಅವಶ್ಯಕ ವೈಯಕ್ತಿಕ ಮೂಲ ದಾಖಲೆಗಳು ಲಭ್ಯವಿದ್ದದ್ದಲ್ಲಿ ಅಥವಾ ದಾಖಲೆಗಳು ಕಳೆದು ಹೋಗಿದ್ದಲ್ಲಿ ಹಾನಿಗೊಳಗಿದ್ದಲ್ಲಿ, ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುವಂತಾಗುತ್ತದೆ ಆದ್ದರಿಂದ ಅಂಥಹರವನ್ನು ಗುರುತಿಸಿ ಅವರಿಗೆ ಅವಶ್ಯ ದಾಖಲೆಗಳನ್ನು ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ.
13 ಸೇವೆಗಳು: ಆಧಾರ್‌ಕಾರ್ಡ್, ಜನನ, ಮರಣ ಪ್ರಮಾಣ ಪತ್ರ, ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಜೋಡಣೆಯೊಂದಿಗೆ ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ಪಿಂಚಣಿ ದಾಖಲೆ, ಆಯುಷ್ಮಾನ್ ಭಾರತ್ ಆರೋಗ್ಯ ಗುರುತಿನ ಚೀಟಿ, ಆರೋಗ್ಯ ವಿಮೆಗಳು, ಇ-ಶ್ರಮ್ ಗುರುತಿನ ಚೀಟಿ, ಯುಡಿಐಡಿ ಗುರುತಿನ ಚೀಟಿ, ಭಾಗ್ಯಲಕ್ಷ್ಮಿ ಯೋಜನೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಪ್ರಮುಖವಾಗಿವೆ.
ಎಸ್‌ಸಿ,ಎಸ್‌ಟಿ ಪಂಗಡದವರ ಬಳಿ ವೈಯಕ್ತಿಕ ಮೂಲ ದಾಖಲೆಗಳಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಲಭ್ಯವಿದ್ದದ್ದಲ್ಲಿ ಹೊಸದಾಗಿ ದಾಖಲೆಗಳನ್ನು ಒದಗಿಸುವುದು, ಲಭ್ಯವಿರುವ ದಾಖಲೆಗಳನ್ನು ತಿದ್ದುಪಡಿ, ನವೀಕರಣಗೊಳಿಸುವುದು, ಲಭ್ಯವಿರುವ ಹಾಗೂ ಹೊಸದಾಗಿ ಸೃಜಿಸಲಾಗುವ ಡಿಜಿ ಲಾಕರ್ ಆ್ಯಪ್‌ನಲ್ಲಿ ಗಣಕೀಕರಣಗೊಳಿಸಿ ಸಂರಕ್ಷಿಸುವುದರಿಂದ ದಾಖಲೆಗಳನ್ನು ಸುಲಭವಾಗಿ ಪಡೆಯಲು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಅಭಿಯಾನ ಅನುಷ್ಠಾನವಾಗಲಿದೆ.
ಗ್ರಾಮ ಪಂಚಾಯತಿಗಳಲ್ಲಿ ನೀಡುವ 13 ದಾಖಲೆಗಳನ್ನು ಡಿಜಿ ಲಾಕರ್ ಆ್ಯಪ್‌ನಲ್ಲಿ ಸುರಕ್ಷಿತವಾಗಿರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಈ ಅಭಿಯಾನ ನಡೆಯಲಿದೆ. ಡಿಜಿ ಲಾಕರ್ ಆ್ಯಪ್ ಎನ್ನುವುದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯದ ಪ್ರಮುಖ ಉಪಕ್ರಮವಾಗಿದೆ. ಆ್ಯಪ್ ಹ್ಯಾಪಿ ನಲ್ಲಿ ದಾಖಲೆಗಳನ್ನು ಡಿಜಿಟಲೈಸ್‌ಮಾಡುವುದರಿಂದ ದಾಖಲೆಗಳನ್ನು ಸಂರಕ್ಷಿಸಲು ಅನುಕೂಲವಾಗಲಿದೆ. ದಾಖಲೆಗಳು ಕಳೆದು ಹೋದಲ್ಲಿ ಹಾನಿಗೊಳಗಾದ ಸಂದರ್ಭದಲ್ಲಿ ಅವುಗಳನ್ನು ಸುಲಭವಾಗಿ ಹಿಂಪಡೆಯಬಹುದು.
ಎಸ್‌ಸಿ,ಎಸ್‌ಟಿ ಸಮುದಾಯಗಳಲ್ಲಿ ಹಲವರಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ, ಈ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದರ ಜತೆಗೆ ಅಗತ್ಯವಿರುವ ದಾಖಲೆಗಳನ್ನು ಮಾಡಿಕೊಟ್ಟು ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಒದಗಿಸುವುದು ನನ್ನ ಗುರುತು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯ 101 ಪಂಚಾಯಿತಿಗಳಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಬಿ.ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ ಬೆಂ.ಗ್ರಾಮಾಂತರ