ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ನಂತರ ಪತಿ ತೊರೆದು ಮದುವೆಯಾಗುವಂತೆ ಪೀಡಿಸಿ ಕಡೆಗೆ ಕೊಲೆ ಮಾಡಲು ಸಂಚುರೂಪಿಸಿದ್ದ ದುಷ್ಕರ್ಮಿ ಇದಕ್ಕಾಗಿ ಸುತ್ತಿಗೆಯನ್ನು ಖರೀದಿಸಿ ತಂದಿದ್ದ..!
ದೊಡ್ಡಬಳ್ಳಾಪುರದ ಜಿಂಕೆ ಬಚ್ಚಹಳ್ಳಿಯಲ್ಲಿ ಕಾರಿನಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ಕಾರಿಗೆ ಬೆಂಕಿ ಹಚ್ಚಿ ನಂತರ ರಾಮನಗರದ ಬಳಿ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಮತ್ತಷ್ಟು ರೋಚಕ ಮಾಹಿತಿ ಲಭ್ಯವಾಗಿದೆ.
ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ರಾಮಾಂಜಿನಪ್ಪ ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ವಿಚ್ಚೇದನ ನೀಡಿದ್ದ ಈತ ವಿವಾಹಿತ ಮಹಿಳೆಯರ ಹಿಂದೆ ಬಿದ್ದಿದ್ದ. ಈ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಸುಜಾತಾ ಎಂಬ ಮಹಿಳೆ ಪರಿಚಯವಾಗಿ ಇಬ್ಬರ ನಡುವಿನ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈಕೆ ಸಹ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ನಂತರದಲ್ಲಿ ರಾಮಾಂಜಿನಪ್ಪ ಮದುವೆಯಾಗುವಂತೆ ಸುಜಾತಾಳ ಬೆನ್ನುಬಿದ್ದಿದ್ದ. ಆದರೆ ಇದಕ್ಕೆ ಸುಜಾತಾ ನಿರಾಕರಿಸುತ್ತಲೇ ಬಂದಿದ್ದರು ಎನ್ನಲಾಗಿದ್ದು ಇದರಿಂದ ಬೇಸತ್ತ ಈತ ಕೊಲೆಗೆ ಸಂಚು ರೂಪಿಸಿದ್ದ.
ಸುತ್ತಿಗೆಯಿಂದ ಬಡಿದು ಹತ್ಯೆ:
ಸ್ನೇಹಿತ ಮಾರಸಂದ್ರದ ಸುರೇಶ್ ಎಂಬುವರಿಂದ ಕಾರು ಪಡೆದು ಪೂರ್ವ ಸಂಚಿನಂತೆ ಸುಜಾತಾಳನ್ನು ಪುಸಲಾಯಿಸಿ ಜಿಂಕೆ ಬಚ್ಚಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಕಾರಿನಲ್ಲಿ ಸುತ್ತಿಗೆಯಿಂದ ತಲೆಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದ. ಅದಾಗಲೇ ಪೆಟ್ರೋಲ್ ಖರೀದಿಸಿ ತಂದಿದ್ದ ದುಷ್ಕರ್ಮಿ ಸುಜಾತಾಳ ದೇಹ ಸೇರಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಈ ವೇಳೆ ಆತನ ಮೊಬೈಲ್ ಹಾಗೂ ಶರ್ಟ್‌ನ್ನು ಅಲ್ಲೆ ಎಸೆದಿದ್ದ. ಪೊಲೀಸರ ಸ್ಥಳ ಪರಿಶೀಲನೆ ವೇಳೆ ಕಾರಿನೊಳಗೆ ಸುತ್ತಿಗೆ ಪತ್ತೆಯಾಗಿದೆ. ಇದರಿಂದಲೇ ಹತ್ಯೆ ಮಾಡಿರುವುದು ಪ್ಲೊರೆನಿಕ್ಸ್ ವರದಿಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆ ದೇಹ ಕಾರಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಇತ್ತು. ಹಾಗೂ ಆಕೆ ಹಾಕಿಕೊಂಡಿದ್ದ ಸೀಟ್‌ಬೆಲ್ಟ್ ಸಹ ಯಥಾಸ್ಥಿತಿಯಲ್ಲೆ ಇತ್ತು. ಕಾರಿನ ನಾಲ್ಕೂ ಬಾಗಿಲುಗಳು ಲಾಕ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವ ಮೊದಲೇ ಮಹಿಳೆ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಟಿಎಂ, ಪ್ಯಾನ್‌ಕಾರ್ಡ್‌ನಿಂದ ಪತ್ತೆ:
ಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಇದು ಅನುಮಾನಸ್ಪದ ಸಾವು ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು. ತನಿಖೆಯ ಬೆನ್ನುಹತ್ತಿದ ಪೊಲೀಸರು ರಾಮಾಂಜಿನಪ್ಪನ ಕಾಲ್ ಡಿಟೈಲ್ ಜಾಡು ಹಿಡಿದಾಗ ಈತನ ಪೂರ್ವಾಪರ ಹಾಗೂ ಈತ ನಡೆಸಿದ್ದ ಕರೆಗಳ ಸಂಭಾಷಣೆಯ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಪೊಲೀಸರು ಎಲ್ಲ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಬಿಡದಿ ಬಳಿ ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಛಿದ್ರಛಿದ್ರವಾಗಿದ್ದ ದೇಹದಿಂದ ಮೃತನನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿತ್ತು ಆದರೆ ಮೃತನ ಬಳಿ ದೊರೆತ ಎಟಿಎಂ ಕಾರ್ಡ್ ಹಾಗೂ ಪ್ಯಾನ್‌ಕಾರ್ಡ್‌ನಿಂದ ಈತನೇ ಪ್ರಕರಣದ ಆರೋಪಿ ಎಂಬುದು ಖಚಿತವಾಗಿತ್ತು.
ಪ್ರಕರಣ ಸಂಬಂಧ ಮೊದಲಿಗೆ ಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರದಲ್ಲಿ ಅನುಮಾನಸ್ಪದ ಸಾವು ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ಖಚಿತವಾಯಿತು. ಪೂರ್ವ ಸಂಚಿನಂತೆ ಸುತ್ತಿಗೆ ಖರೀದಿಸಿ ತಂದಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಜಾಲತಾಣಗಳ ಮೂಲಕ ಪರಿಚಯವಾಗಿ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿ ದುರಂತ ಅಂತ್ಯ ಕಂಡಿದೆ.
ಸಾದಿಕ್‌ಪಾಷಾ, ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ