ವಿಜಯವಾಣಿ ಸುದ್ದಿಜಾಲ ಹೊಸೂರು
ಉಸಿರಾಟದ ತೊಂದರೆಯಿಂದ 5 ತಿಂಗಳ ಹಸುಗೂಸು ಮೃತಪಟ್ಟಿದೆ ಎಂದಿದ್ದ ಪತ್ನಿಯ ವಿರುದ್ಧವೇ ದೂರು ದಾಖಲಿಸಿರುವ ಪತಿ ಮಗು ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿರುವ ಪ್ರಕರಣ ಹೊಸೂರಿನ ಕೃಷ್ಣಗಿರಿ ಠಾಣೆಯಲ್ಲಿ ಬೆಳಕಿಗೆ ಬಂದಿದೆ.
ಬೆನ್ನಟ್ಟಿ ಗ್ರಾಮದ ಸುರೇಶ್ ಎಂಬುವರು ದೂರು ನೀಡಿದ್ದು, ಪತ್ನಿ ಭಾರತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಸಹಕಾರ ನೀಡಿದ್ದಾರೆ ಎಂಬ ಆರೋಪದಡಿ ಸುಮಿತ್ರ ಎಂಬುವರು ಪೊಲೀಸರ ವಶದಲ್ಲಿದ್ದಾರೆ.
ಬೆನ್ನಟ್ಟಿ ಗ್ರಾಮದ ಸುರೇಶ್ ಹಾಗೂ ಭಾರತಿ ದಂಪತಿಗೆ 5 ಹಾಗೂ 2 ವರ್ಷದ ಮಕ್ಕಳಿದ್ದು 5 ತಿಂಗಳ ಮಗುವಿತ್ತು. ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಹಲವು ಬಾರಿ ರಾಜಿಪಂಚಾಯಿತಿ ನಡೆದಿತ್ತು. ಪೆಂಟಿಂಗ್ ಕೆಲಸ ಮಾಡುತ್ತಿದ್ದ ಸುರೇಶ್ ನ.4ರಂದು ಮನೆಗೆ ಮರಳಿದಾಗ ಮಗು ಅರೆಪ್ರಜ್ಞಾವಸ್ಥೆಯಲ್ಲಿದ್ದಂತೆ ಕಂಡುಬಂದಿತ್ತು. ವಿಚಾರಿಸಿದಾಗ ಮಗು ಹಾಲು ಕುಡಿಯುವಾಗ ಕೆಮ್ಮು ಬರುತ್ತಿದ್ದು ಆರೋಗ್ಯ ಹದಗೆಟ್ಟಿದೆ ಎಂದು ಪತ್ನಿ ತಿಳಿಸಿದ್ದಳು. ತಕ್ಷಣ ಮಗುವನ್ನು ಕೆಳಮಂಗಲಂ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಮಗು ಪರೀಕ್ಷಿಸಿದ ವೈದ್ಯರು ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು.
ಮೃತ ಮಗುವಿನ ಶವಸಂಸ್ಕಾರ ನೆರವೇರಿಸಲಾಗಿತ್ತು. ಸುರೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಗುವಿನ ಶವ ಹೊರತೆಗೆದು ಶವಪರೀಕ್ಷೆ ನಡೆಸಲು ಮುಂದಾಗಿದ್ದು ವರದಿ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.