nelamangala 
ಬೆಂಗಳೂರು ಗ್ರಾಮಾಂತರ

ವಿಮಾನ ನಿಲ್ದಾಣ ಕನಕಪುರಕ್ಕೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ಭಾಗದಲ್ಲಿ 2 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂಬ ಬಗ್ಗೆ ಭಾರಿ ಸುದ್ದಿ ಹರಡಿತ್ತು. ಈ ಕುರಿತು ಕೇಂದ್ರ ಸಚಿವ ರಾಮ್‌ಮೋಹನ್ ನಾಯ್ದು ಅವರನ್ನು ಭೇಟಿ ಮಾಡಿದ್ದ ರಾಜ್ಯ ಸರ್ಕಾರದ ಪ್ರಮುಖರು ಉದ್ದೇಶಿತ ವಿಮಾನ ನಿಲ್ದಾಣ ನೆಲಮಂಗಲದಲ್ಲಿ ಬೇಡ ಬೆಂಗಳೂರು ದಕ್ಷಿಣ ಭಾಗದಲ್ಲಿನ ಕನಕಪುರಕ್ಕೆ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಇದು ಕೇಂದ್ರ ಸಚಿವರ ಗಮನದಲ್ಲಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದರು.
ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದ ಕುಣಿಗಲ್ ವೃತ್ತದ ಬಳಿ ವಾರಾಂತ್ಯದಲ್ಲಿ ಹೆಚ್ಚಿನ ಸಂಚಾರ ಸಿಕ್ಕಿನಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದ್ದುರಿಸುತ್ತಿದ್ದಾರೆ. ಅದ್ದರಿಂದ ಕುಣಿಗಲ್ ವೃತ್ತದಲ್ಲಿ ವಾಹನ ಅನುಕೂಲವಾಗುವ ನಿಟ್ಟಿನಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಸಂಸದರಿಗೆ ಮನವಿ ಸಲ್ಲಿಸಿದರು. ಅಂಬೇಡ್ಕರ್ ನಗರದ ಸಮಸ್ಯೆ ಕುರಿತು ರಾಜೀವ್ ಗಾಂಧಿ ವಸತಿ ಯೋಜನೆಯ ಗಮನಕ್ಕೆ ತರಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಜನರಿಗೆ ಹಕ್ಕು ಪತ್ರ ಹಾಗೂ ಖಾತೆ ವಿತರಣೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಸಂಸದರು ತಿಳಿಸಿದರು.
ಹೈಟೆಕ್ ತಂಗುದಾಣ:
ಈ ಭಾಗದ ಜನರಿಗೆ ಅನುಕೂಲವಾಗಲು ಅರಿಶಿನಕುಂಟೆ ಗ್ರಾಮದ ಮಾರುತಿ ಬಡಾವಣೆ ಹಾಗೂ ಬಸವನಹಳ್ಳಿ ಗ್ರಾಮದ ಬಳಿಯ ಶ್ರೀ ಸಾಯಿರಾಮ್ ಬಡಾವಣೆಯಲ್ಲಿ ನೂತನವಾಗಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ.ತಂಗುದಾಣದಲ್ಲಿ ಕುಡಿಯುವ ನೀರು, ವಿದ್ಯುತ್, ಸಿಸಿ ಕ್ಯಾಮರಾ ಅಳವಡಿಕೆ ಮೂಲಕ ಹೈಟೆಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ತಂಗುದಾಣವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದರು.
ಸದನದ ಗಮನಕ್ಕೆ ತರಲಾಗಿದೆ:
ಈಗಾಗಲೇ ಸದನದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಗೆ ಪುಷ್ಪ ಮಂಡಳಿ ಹಾಗೂ ಹೈನುಗಾರರಿಗೆ ಅರೋಗ್ಯ ವಿಮೆ, ಜೀವ ವಿಮೆ ಮಾಡಲು ಪಶು ಸಂಗೋಪನ ಮಂಡಳಿ ಸ್ಥಾಪನೆ ಮಾಡಬೇಕು ಎಂಬ ಬಗ್ಗೆ ಪ್ರಸ್ತಾಪಿಸಲಾಗಿದೆ. ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ರಿಂಗ್ ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಸೇರಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲವು ನೀರಾವರಿ ಯೋಜನೆ ಬಗ್ಗೆ ಸದನದ ಗಮನಕ್ಕೆ ತರಲಾಗಿದೆ ಎಂದು ಸಂಸದರು ತಿಳಿಸಿದರು. ತರಬನಹಳ್ಳಿ ಬಳಿ 150ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಮೇಲ್ಸೆತುವೆ ಮಂಜೂರು ಮಾಡಿದ್ದು ಸ್ಥಳ ಪರಿಶೀಲನೆ ನಡೆಸಿ ಶೀಘ್ರದಲ್ಲೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.