Movement of wild animals near villages
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿನ ಕಾಡಂಚಿನ ಗ್ರಾಮಗಳ ಸಮೀಪ ಕಾಡುಪ್ರಾಣಿಗಳ ಸಂಚಾರ ಹೆಚ್ಚು ಕಂಡುಬರುತ್ತಿದ್ದು ಗ್ರಾಮಸ್ಥರು ಪ್ರಾಣಭೀತಿ ಎದುರಿಸುವಂತಾಗಿದೆ.
ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿ ಶಿವಗಂಗೆ ತಪ್ಪಲು, ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ವ್ಯಾಪ್ತಿ, ಹುಲುಕುಡಿ ಬೆಟ್ಟದ ಸಮೀಪ ಹಾಗೂ ದೇವನಹಳ್ಳಿ ಕೊಡಗುರ್ಕಿ ಗ್ರಾಮಗಳ ಬಳಿ ಇತ್ತೀಚಿಗೆ ಚಿರತೆ ಹಾಗೂ ಕರಡಿಗಳ ಸಂಚಾರ ಕಂಡುಬರುತ್ತಿದ್ದು, ಗ್ರಾಮಸ್ಥರು ಹೊಲಗದ್ದೆಗಳ ಕಡೆ ಹೋಗಿ ಬರಲು ಹೆದರುವಂತಾಗಿದೆ.
ಕಳೆದ ವರ್ಷ ಶಿವಗಂಗೆ ಸಮೀಪದ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದ್ದ ಪ್ರಕರಣದ ಬಳಿಕ ಕಾಡಂಚಿನ ಗ್ರಾಮದಲ್ಲಿ ಭಯದ ವಾತಾವರಣ ಮುಂದುವರೆದಿದೆ. ಸಾಮಾನ್ಯವಾಗಿ ಮುಂಜಾನೆಯ ಮುಸುಕಿನ ವೇಳೆ ಹಾಗೂ ರಾತ್ರಿ ಸಮಯಗಳಲ್ಲಿ ಚಿರತೆ ಹಾಗೂ ಕರಡಿಗಳು ಗ್ರಾಮಗಳ ಸಮೀಪ ಸಂಚಾರ ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಂಡುಬರುತ್ತಿದೆ. ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ನಿರಂತರವಾಗಿ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಲೇ ಇವೆ. ಅರಣ್ಯ ಇಲಾಖೆ ಕಾರ್ಯಾಚರಣೆ ಮೂಲಕ ಆಗಾಗ ಕಾಡುಪ್ರಾಣಿಗಳನ್ನು ಸೆರೆಹಿಡಿಯುವ ಕೆಲಸ ಮಾಡುತ್ತಲೇ ಇದೆ. ಆದರೆ ಕೆಲವು ದಿನಗಳ ನಂತರ ಮತ್ತೆ ಕಾಡುಪ್ರಾಣಿಗಳು ಪ್ರತ್ಯಕ್ಷವಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.
ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ರೆಸಾರ್ಟ್ ಆವರಣದಲ್ಲಿ ಕಳೆದೆರಡು ದಿನದ ಹಿಂದೆ ತಡರಾತಿ ಎರಡು ಕರಡಿಗಳು ವಿಹಾರ ನಡೆಸುತ್ತಿರುವ ದೃಶ್ಯ ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮತ್ತಷ್ಟು ಆತಂಕ್ಕೆ ಕಾರಣವಾಗಿದೆ. ರೆಸಾರ್ಟ್‌ನ ಗಾರ್ಡನ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಪ್ರದೇಶದಲ್ಲಿ ಕರಡಿಗಳು ಓಡಾಡಿರುವ ದೃಶ್ಯಗಳನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂದಿಬೆಟ್ಟದ ತಪ್ಪಲಿನಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ. ಇತ್ತೀಚಿಗೆ ಇದೇ ರಸ್ತೆಯಲ್ಲಿ ಜಿಂಕೆಯೊಂದು ವಾಹನಕ್ಕೆ ಸಿಲುಕಿ ಮೃತಪಟ್ಟಿತ್ತು.
ಕಾಡಂಚಿನಲ್ಲಿ ಒತ್ತುವರಿ, ಮಳೆಕೊರತೆಯಿಂದ ಕಾಡು ಪ್ರದೇಶಗಳಲ್ಲಿ ಉದ್ಭವವಾಗಿರುವ ಆಹಾರ ಹಾಗೂ ನೀರಿನ ಕೊರತೆ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ಗ್ರಾಮಗಳತ್ತ ವಲಸೆ ಬರುತ್ತಿವೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಬೋನುಗಳ ಮೂಲಕ ಕಾಡುಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಮುಂದಾಗಿವೆ.
ರಾತ್ರಿ ವೇಳೆಯಲ್ಲಿ ಕರಡಿಗಳು ಗ್ರಾಮಗಳತ್ತ ಬಂದರೆ ಜನರ ಮೇಲೆ ದಾಳಿ ಮಾಡುವ ಅಪಾಯ ಇರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಅರಣ್ಯ ಇಲಾಖೆ ವನ್ಯಜೀವಿಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ವನ್ಯಜೀವಿಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೋನುಗಳನ್ನಿಟ್ಟು ಚಿರತೆ, ಕರಡಿಯಂಥ ಪ್ರಾಣಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯೂ ನಿರಂತರವಾಗಿದೆ. ಆಹಾರ ಅರಸಿಕೊಂಡು ಕಾಡುಪ್ರಾಣಿಗಳು ಗ್ರಾಮಗಳತ್ತ ಬರುತ್ತಿರುವುದು ಕಂಡುಬರುತ್ತಿದೆ. ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಜತೆಗೆ ಕಾಡುಪ್ರಾಣಿಗಳು ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು.
ಸಂತೋಷ್, ಡಿಸಿಎ್ ಅರಣ್ಯ ಇಲಾಖೆ