ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಪಡೆಯುವ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್ ಪಡೆ ಭವಿಷ್ಯದಲ್ಲಿ ಗ್ರಾಮಾಂತರ ಭಾಗದಲ್ಲಿ ್ಲ ಯುವನಾಯಕನನ್ನು ಬೆಳೆಸಲು ಮಣೆ ಹಾಕಲಿದೆ ಎಂಬ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ.
ಹೊಸಕೋಟೆ ಶಾಸಕ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್‌ಬಚ್ಚೇಗೌಡರಿಗೆ ಡಿಕೆ ಸಂಪುಟದಲ್ಲಿ ಸ್ಥಾನ ನಿಕ್ಕಿಯಾಗಲಿದೆ ಎಂಬ ಮಾತು ದಟ್ಟವಾಗಿತ್ತು. ಕಡೇ ಕ್ಷಣದವರೆಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಕಳೆದ ಕೆಲವು ಸಾಮಾಜಿಕ ಜಾಲತಾಣಗಳಲ್ಲೂ ಶರತ್‌ಬಚ್ಚೇಗೌಡ ಹೆಸರು ಹೆಚ್ಚು ಸದ್ದು ಮಾಡುತ್ತಿತ್ತು. ಆದರೆ ಸಚಿವ ಸಂಪುಟದ ಪಟ್ಟಿಯಲ್ಲಿ ಶರತ್‌ಬಚ್ಚೇಗೌಡರ ಹೆಸರು ಇಲ್ಲದಿರುವುದು ಹೊಸಕೋಟೆಯ ಕಾಂಗ್ರೆಸ್ ಪಡೆಗೆ ತೀವ್ರ ನಿರಾಸೆಯುಂಟು ಮಾಡಿದೆ.
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯರು ಹಾಗೂ ಯುವಜನಪ್ರತಿನಿಗಳಿಗೆ ಸ್ಥಾನ ಕೊಡಬೇಕು ಎಂಬ ಲೆಕ್ಕಾಚಾರದಡಿ ಗ್ರಾಮಾಂತರ ಜಿಲ್ಲೆಯಿಂದ ಶರತ್‌ಬಚ್ಚೇಗೌಡ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಈಗಾಗಲೇ ಜಿಲ್ಲೆಯ ಉಸ್ತುವಾರಿಯಾಗಿರುವ ಸಚಿವ ಕೆ.ಎಚ್.ಮುನಿಯಪ್ಪ ಅವರ ನಂತರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಯುವನಾಯಕನನ್ನು ಬೆಳೆಸುವ ಬಗ್ಗೆ ಕೈಪಡೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶರತ್‌ಬಚ್ಚೇಗೌಡರ ಹೆಸರು ಹೆಚ್ಚು ಕೇಳಿಬರುತ್ತಿತ್ತು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಎರಡನೇ ಪಟ್ಟಿಯಲ್ಲಿ ಮಂತ್ರಿಗಿರಿ ಖಚಿತ ಎಂಬ ಮಾತು ರಾಜಕೀಯ ಚರ್ಚೆಯಾಗಿತ್ತು. ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಎರಡನೇ ಪಟ್ಟಿಯಲ್ಲಿ 19 ಮಂದಿ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ. ವಿವಿಧ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿ ಅಂತಿಮಗೊಳಿಸಲಾಗಿದೆ ಎನ್ನಲಾಗಿದ್ದರೂ ಶರತ್‌ಬಚ್ಚೇಗೌಡ ಹೆಸರು ಕೈ ತಪ್ಪಲು ಪ್ರಬಲ ಕಾರಣವೇನು ಎಂಬುದು ಹೊಸಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ಇತ್ತೀಚಿಗೆ ಹೊಸಕೋಟೆಯ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದ ಶಾಸಕರು, ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮವಾಗಿ ಉತ್ತರಗಳನ್ನು ಬರೆದಿದ್ದೇನೆ, ಅಂಕಗಳ ಮೌಲ್ಯಮಾಪನ ಮಾಡುವವರು ಅಂಕ ನೀಡಿದಲ್ಲಿ ಮುಂದಿನ ಸೋಮವಾರ ನಡೆಯುವ ಪ್ರತಿಭಾ ಪುರಸ್ಕಾರದಲ್ಲಿ ನಾನೂ ಇರುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನ ಸಿಗುವ ಬಗ್ಗೆ ಸುಳಿವು ನೀಡಿದ್ದರು. ನಾನು ಮಾತ್ರ ಉತ್ತಮವಾಗಿ ಪತ್ರಿಕೆಗೆ ಉತ್ತರಗಳನ್ನು ನೀಡಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಮೌಲ್ಯಮಾಪಕರು ಸರಿಯಾದ ಅಂಕಗಳನ್ನು ನೀಡಿಲ್ಲ ಎಂಬ ಅಸಮಾಧಾನ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಹೊಗೆಯಾಡುತ್ತಿದೆ.
ಒಕ್ಕಲಿಗ ಸಮುದಾಯದಿಂದ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಒಕ್ಕಲಿಗ ನಾಯಕರ ತೀವ್ರ ಒತ್ತಡವಿತ್ತು. ಶರತ್‌ಬಚ್ಚೇಗೌಡರು ಇದೇ ಸಮುದಾಯವಾದ್ದರಿಂದ ಆಯ್ಕೆ ಕಗ್ಗಂಟಾಯಿತು ಎಂಬ ಮಾತು ಹರಿದಾಡುತ್ತಿದೆ. ಶರತ್‌ಬಚ್ಚೇಗೌಡರು ಯುವಕರಾಗಿದ್ದು, ಮುಂದಿನ ಚುನಾವಣೆಗಳಲ್ಲೂ ಗೆಲುವು ಸಾಧಿಸುವ ವರ್ಚಸ್ಸು ಇದೆ. ಆದ್ದರಿಂದ ಮುಂದಿನ ದಿನಗಳಲ್ಲೂ ಅವರಿಗೆ ಅವಕಾಶದ ಬಾಗಿಲು ತೆರೆದಿರುತ್ತದೆ ಈ ನಿಟ್ಟಿನಲ್ಲಿ ಈ ಬಾರಿ ರೇಸಿನಿಂದ ಅಂತರ ಕಾಯ್ದುಕೊಳ್ಳಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ 6 ಕ್ಕೂ ಹೆಚ್ಚು ಮಂತ್ರಿ ಸ್ಥಾನಗಳು ಬೆಂಗಳೂರಿಗೆ ದಕ್ಕಿದೆ, ರಾಜಧಾನಿಗೆ ಹೊಂದಿಕೊಂಡಂತಿರುವ ಜಿಲ್ಲೆ ಹಾಗೂ ತಾಲೂಕು ಆಗಿರುವುದರಿಂದ ಮತ್ತೊಂದು ಸಚಿವ ಸ್ಥಾನದ ಅವಶ್ಯಕತೆ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆ ನಡೆದಿದೆ. ಇದಲ್ಲದೇ ಈಗಾಗಲೇ ಕೆ.ಎಚ್.ಮುನಿಯಪ್ಪ ಜಿಲ್ಲೆಯ ಮಂತ್ರಿಯಾಗಿರುವುದರಿಂದ ಮತ್ತೊಂದು ಮಂತ್ರಿಗಿರಿ ಇದೇ ಜಿಲ್ಲೆಗೆ ನೀಡಿದರೆ ಇನ್ನಿತರರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರವಾಗಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.