minister meeting 
ಬೆಂಗಳೂರು ಗ್ರಾಮಾಂತರ

ಎಲ್ಲ ಸರ್ಕಾರಿ ಆಸ್ತಿಗೆ ಜಿಯೋಟ್ಯಾಗ್ ಕಡ್ಡಾಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯಿತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದರು.
ದೇವನಹಳ್ಳಿಯ ಜಿಪಂ ಕಾರ್ಯಾಲಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಪಂಚಾಯಿತಿಯ ಯಾವುದೇ ಆಸ್ತಿ ಕಬಳಿಕೆ ಆಗದಂತೆ ಮತ್ತು ಗುಣಮಟ್ಟದ ಖಾತ್ರಿಗೆ ಜಿಯೋ ಟ್ಯಾಗ್ ಮಾಡಲು ಸೂಚಿಸಿರುವುದಾಗಿ ಹೇಳಿದರು.
ಪಂಚಾಯಿತಿ ಮಟ್ಟದಲ್ಲೂ ಎ್ಎಸ್‌ಟಿಫಿ:
ರಾಜ್ಯದಲ್ಲಿ ಇಂದಿಗೂ 7483 ಶೌಚಗುಂಡಿ ಕಾರ್ಮಿಕರು ಇದ್ದಾರೆ ಎಂದು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ನೀಡಿರುವ ಹೇಳಿಕೆ ಉಲ್ಲೇಖಿಸಿದ ಸಚಿವರು, ಯಾವುದೇ ಮಲಗುಂಡಿಯ ಸ್ವಚ್ಛತೆಯನ್ನು ಯಾವುದೇ ಕರ್ಮಚಾರಿಯ ಕೈಯಿಂದ ಮಾಡಿಸಿದರೆ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುವುದು, ಯಂತ್ರಗಳ ಮೂಲಕವೇ ಸ್ವಚ್ಛತೆ ಮಾಡಬೇಕೆಂದು ಸೂಚಿಸಲಾಗಿದ್ದು ಇದಕ್ಕಾಗಿ ಅಗತ್ಯವಿರುವ ಜೆಟ್ಟಿಂಗ್, ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು ಎಂದರು. ತಾವು ಈ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಯೋಜನೆ ರೂಪಿಸಿ, ದೇವನಹಳ್ಳಿಯಲ್ಲಿ ಕೂಡ ಒಂದು ಎ್ಎಸ್‌ಟಿಪಿ ಮಾಡಿದ್ದನ್ನು ಸ್ಮರಿಸಿದರು, ಈಗ ಪಂಚಾಯಿತಿ ಮಟ್ಟದಲ್ಲೂ ಎ್ಎಸ್‌ಟಿಫಿ ನಿರ್ಮಿಸುವುದಾಗಿ ತಿಳಿಸಿದರು.
ಇ-ಸ್ವತ್ತು ಸರಳ:
ಇ-ಸ್ವತ್ತು ಪಡೆಯುವಲ್ಲಿ ಇರುವ ಸರ್ವರ್ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜತೆಗೆ ಪೂರ್ವಜರಿಂದ ಬಂದ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗ್ರಾಮೀಣರ ಬಳಿ ಯಾವುದೇ ದಾಖಲೆ ಇಲ್ಲದ ಕಾರಣ ಅವರೆಲ್ಲರಿಗೂ ದಾಖಲೆಯ ವಿನಾಯಿತಿ ನೀಡಿ, ಸ್ವಾಧೀನಾನುಭವದ ಖಾತ್ರಿ ಪಡಿಸಿಕೊಂಡು ಆಸ್ತಿ ಹಕ್ಕು ನೀಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.
ವರ್ಷಾಂತ್ಯದೊಳಗೆ ಪಂಚಾಯಿತಿ ಚುನಾವಣೆ:
ಅವಧಿ ಮುಗಿದಿರುವ ಎಲ್ಲ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ವಹಿಸಿದ್ದು, ಈ ವರ್ಷಾಂತ್ಯದೊಳಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆ ನಡೆದೇ ನಡೆಯುತ್ತದೆ, ಅಧಿಕಾರ ವಿಕೇಂದ್ರೀಕರಣದ ಉದ್ದೇಶವನ್ನು ಸರ್ಕಾರ ಈಡೇರಿಸುತ್ತದೆ ಎಂದು ಸಚಿವರು ತಿಳಿಸಿದರು. ಜಲಜೀವನ ಅಭಿಯಾನದ ಅಡಿಯಲ್ಲಿ ಪೈಪ್‌ಲೈನ್ ಅಳವಡಿಸಲು ಅಗೆದಿರುವ ರಸ್ತೆಯನ್ನು ಮರು ಅಭಿವೃದ್ಧಿ ಪಡಿಸದೇ ಇರುವ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಏನು ಕ್ರಮ ವಹಿಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು. ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಈಶ್ವರ ಖಂಡ್ರೆ, ನೀರಿನ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಗಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅಡ್ಡಿ ಆಗದ ರೀತಿ ತುರ್ತು ಕ್ರಮ ವಹಿಸಲು ಮತ್ತು ಎಷ್ಟು ಗ್ರಾಮಗಳಲ್ಲಿ ಹರ್‌ಘರ್ ಜಲ್ ವರದಿ ಮಾಡಲಾಗಿದೆ. ಎಷ್ಟು ಪ್ರಮಾಣಪತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಒದಗಿಸಲು ಸೂಚಿಸಿದರು.
ಜಲ ಜೀವನ್ ಮಿಷನ್ ಮತ್ತು ರಸ್ತೆ ಅಭಿವೃದ್ಧಿ ಸೇರಿ ಯಾವುದೇ ಕಾಮಗಾರಿಯಲ್ಲಿ ಯಾರೇ ಗುತ್ತಿಗೆದಾರರು ವಿಳಂಬ ಮಾಡಿದ್ದರೆ, ನೋಟಿಸ್ ಜಾರಿ ಮಾಡಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಒತ್ತು:
ಎಲ್ಲ ನಾಗರಿಕತೆಗಳೂ ಹುಟ್ಟಿರುವುದು ನದಿ ಮತ್ತು ಜಲ ಮೂಲಗಳ ತಟದಲ್ಲಿ. ಮನುಷ್ಯ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಕುಡಿಯುವ ನೀರಿನ ಪೂರೈಕೆಗೆ ಒತ್ತು ನೀಡುವಂತೆ ಹಾಗೂ ಯಾವುದೇ ಜಲ ಮೂಲದಲ್ಲಾಗಲೀ, ಕೊಳವೆ ಮಾರ್ಗದಲ್ಲಾಗಲಿ ಕಲುಷಿತ ನೀರು ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಲು, ಸೋರಿಕೆ ಇದ್ದರೆ ಪರಿಶೀಲಿಸುವಂತೆ ಸೂಚಿಸಿದ ಸಚಿವರು. ಕೊಳವೆ ಬಾವಿಯಿಂದ ಪೂರೈಸುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ಪ್ಲೊರೈಡ್ ಸೇರಿ ಯಾವುದೇ ಅಪಾಯಕಾರಿ ಅಂಶಗಳಿದ್ದರೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.