mini forest 
ಬೆಂಗಳೂರು ಗ್ರಾಮಾಂತರ

12 ಎಕರೆಯಲ್ಲಿ ಮಿನಿ ದಟ್ಟಾರಣ್ಯ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟೆನಹಳ್ಳಿ ಗ್ರಾಮದ ಹೊರವಲಯದ ಟೆಲಿಕಾಂ ಗ್ರಿನ್ ವುಡ್ಸ್ ಬಡಾವಣೆಯಲ್ಲಿ ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಪುಟ್ಟ ಅರಣ್ಯ(ಮಿನಿ ಾರೆಸ್ಟ್) ಮೈದೆಳೆಯುತ್ತಿದೆ.
ಜಾಲಿಗೆ ಗ್ರಾಪಂ ಮತ್ತು ಮೈರಾಡ ಕಂಪನಿ ಸಹಭಾಗಿತ್ವದಲ್ಲಿ ಅರಣ್ಯೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಹಲವು ಬಗೆಯ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮುಖ್ಯವಾಗಿ ಮಹಾಗನಿ, ಆಲ, ನೇರಳೆ, ಅರಳಿ, ಹೊನ್ನೆ, ಹಿಪ್ಪೆ, ಹುಣಸೆ, ಅತ್ತಿ, ಬೂರಗ, ಜಂಬು ನೇರಳೆ, ಸೀಬೆ, ಕರಿಬೇವು, ಗಸಗಸೆ, ಬಾಳೆ, ಕಿರುನಲ್ಲಿ, ಪನ್ನೆರಳೆ, ನಿಂಬೆ, ಗೋಡಂಬಿ, ದಾಸವಾಳ, ಕರೂಂಡ, ಅವಕಾಡೊ, ಬಿದಿರು ಗಿಡಗಳನ್ನು ಬೆಳೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಂದೆಡೆ ಕೈಗಾರೀಕರಣ ವಿಸ್ತೀರ್ಣಗೊಳ್ಳುತ್ತಿದ್ದು ಗಿಡಮರಗಳಿಗೆ ಕೊಡಲಿಪೆಟ್ಟು ಬೀಳುತ್ತಿದೆ. ಈ ನಿಟ್ಟಿನಲ್ಲಿ ಜಾಲಿಗೆ ಗ್ರಾಪಂ ಸಸಿಗಳನ್ನು ನೆಟ್ಟು ಮಿನಿ ಅರಣ್ಯ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿರುವುದನ್ನು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ವಹಣೆ ಹೊಣೆ ಹೊತ್ತಿರುವ ಕಂಪನಿ 2 ವರ್ಷದ ಬಳಿಕ ಗ್ರಾಪಂ ಹಸ್ತಾಂತರಿಸಲು ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ದಟ್ಟಕಾಡು ನಿರ್ಮಾಣ:
ಮಿಯಾವಾಕಿ ಅರಣ್ಯವೆಂದರೆ, ಮಿನಿ ಅರಣ್ಯಿಕರಣಗೊಳಿಸುವುದಾಗಿದ್ದು, ಪುಟ್ಟದಾದ ಪ್ರದೇಶದಲ್ಲಿ ದಟ್ಟವಾದ ಕಾಡು ಬೆಳೆಸುವ ಮಿಯಾವಾಕಿ ಪರಿಕಲ್ಪನೆ ಇದಾಗಿದ್ದು. ಹಸಿರುಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸುತ್ತಮುತ್ತಲಿನಲ್ಲಿ ಮಾಲಿನ್ಯರಹಿತವನ್ನಾಗಿಸುವುದು, ವಾತಾವರಣದಲ್ಲಿ ಉಷ್ಣತೆ ತಗ್ಗಿಸುವುದು, ಜೈವಿಕ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಪಕ್ಷಿ, ಚಿಟ್ಟೆ, ಜೇನು, ಸಣ್ಣ ಪ್ರಾಣಿಗಳಿಗೆ ಆವಾಸಸ್ಥಾನ ಸಿಗುವಂತೆ ಮಾಡುವುದು, ಮಳೆ ನೀರು ಇಂಗಲು, ಮಣ್ಣಿನ ಸವಕಳಿ ತಡೆಯಲು ಮತ್ತು ವೇಗದ ಬೆಳವಣಿಗೆಗೆ ದೇಶೀಯ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆ ಇದಾಗಿದೆ.
ಒತ್ತುವರಿ ತೆರವು:
ಬೆಟ್ಟೆನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸುಮಾರು 3 ಎಕರೆಯಷ್ಟು ಪ್ರದೇಶವನ್ನು ತೆರವುಗೊಳಿಸಲಾಗಿದೆ. ಕಳೆದ ಸಾಲಿನಲ್ಲಿ ಮೈರಾಡ ಮತ್ತು ಐಟಿಸಿ ಸಂಸ್ಥೆ ಮೂಲಕ ಸುಮಾರು 16 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಯಾವುದೇ ಗೋಮಾಳಗಳು ಕಂಡುಬರದ ಕಾರಣದಿಂದಾಗಿ ಗ್ರಾಪಂ ವ್ಯಾಪ್ತಿಯಲ್ಲಿನ ಬಡವಾಣೆಗಳಲ್ಲಿ ಉದ್ಯಾನಗಳ ಜಾಗದಲ್ಲಿ ಸಸಿಗಳನ್ನು ನೆಡುವ ಕಾರ್ಯ ಆರಂಭಿಸಲಾಗಿದೆ. ಗಿಡಗಳನ್ನು ನೆಡುವ ಮುನ್ನವೇ ಮಣ್ಣಿನ ಪರೀಕ್ಷೆ ನಡೆಸಿ, ಭೂಮಿಯನ್ನು ಅಗೆದು ಸಗಣಿ ಗೊಬ್ಬರ, ಹುಲ್ಲು, ಭತ್ತದ ಹೊಟ್ಟು ಬೆರೆಸಿ ಫಲವತ್ತಾಗಿಸಿದ ನಂತರ, ಸ್ಥಳೀಯವಾಗಿ ನೈಸರ್ಗಿಕ ನೀರಿನ ಮೂಲವಾಗಿರುವ ಕ್ವಾರಿ ಜಾಗದಲ್ಲಿ ಸಂಗ್ರಹಣೆಯಾದ ನೀರನ್ನೆ ಬಳಸಿಕೊಂಡು ಸಸಿಗಳ ಬೆಳವಣಿಗೆಗೆ ನೀರು ಹಾಯಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಖಾಲಿ ಇರುವಂತಹ ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭದಲ್ಲೇ ಸಸಿಗಳನ್ನು ನೆಟ್ಟು ಪೋಷಿಸಲು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಮಿನಿ ಅರಣ್ಯಿಕರಣ ಪ್ರದೇಶವನ್ನು ಖುದ್ದಾಗಿ ಪರಿಶೀಲಿಸಲಾಗುವುದು. ಜಿಲ್ಲೆಯ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
ಡಾ.ವಾಸಂತಿ ಅಮರ್, ಜಿಪಂ ಸಿಇಒ
ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಈ ಹಿನ್ನೆಲೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿದೆ. ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಮೈರಾಡ ಸಂಸ್ಥೆಯ ಸಹಭಾಗಿತ್ವದಲ್ಲಿ ಮಿನಿ ಅರಣ್ಯ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ದಟ್ಟ ಅರಣ್ಯ ನಿರ್ಮಾಣವಾಗಲಿದೆ. ನಿರ್ವಹಣೆ ಹೊಣೆ ಹೊತ್ತಿರುವ ಸಂಸ್ಥೆಯು 2 ವರ್ಷ ನಿರ್ವಹಣೆ ಮಾಡಿ ಗ್ರಾಪಂಗೆ ಹಸ್ತಾಂತರವಾಗಲಿದೆ.
ಎಚ್.ಪ್ರಕಾಶ್ ಪಿಡಿಒ, ಜಾಲಿಗೆ ಗ್ರಾಪಂ