Migration of wild animals towards villages 
ಬೆಂಗಳೂರು ಗ್ರಾಮಾಂತರ

ಗ್ರಾಮಗಳತ್ತ ಕಾಡುಪ್ರಾಣಿಗಳ ವಲಸೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಿರುಬೇಸಿಗೆ ಕಾಲಿಡುತ್ತಿದ್ದಂತೆ ಕಾಡುಪ್ರಾಣಿಗಳ ಪರದಾಟ ಅರಂಭವಾಗುತ್ತದೆ, ನೀರು ಆಹಾರ ಅರಸಿ ಕಾಡಂಚಿನ ಗ್ರಾಮಗಳತ್ತ ವಸಲೆ ಬರುತ್ತವೆ.
ಹೌದು..ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯಲ್ಲಿ ಸಾವಿರಾರು ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶ ಕಳೆದ ಕೆಲವು ದಿನಗಳಿಂದ ನವಿಲುಗಳು, ಚಿರತೆ. ಜಿಂಕೆ, ತೋಳ, ನರಿ, ಕಾಡುಹಂದಿ, ಮೊಲ, ಕೋತಿ ಸೇರಿ ಹಲವು ಕಾಡುಪ್ರಾಣಿಗಳ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇವುಗಳಿಗೆ ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಆಸರೆಗಳು ಬೇಸಿಯಲ್ಲಿ ಬತ್ತಿ ಹೋಗುತ್ತವೆ. ಇದರಿಂದ ನೀರು ಅರಸಿ ಗ್ರಾಮಗಳ ಕಡೆಗೆ ಕಾಡು ಪ್ರಾಣಿಗಳು ಬರುತ್ತಿವೆ. ಗ್ರಾಮಳತ್ತ ದೃಷ್ಟಿನೆಟ್ಟಿರುವ ಚಿರತೆಗಳಿಂದ ಹಸು, ಕುರಿ, ಮೇಕೆಗಳು ಬಲಿಯಾಗುತ್ತಿದ್ದು ರೈತಾಪಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ಅರಣ್ಯ ಪ್ರದೇಶಗಳಲ್ಲಿ ಬೆಂಕಿ:
ತಾಲೂಕಿನ ಮೀಸಲು ಅರಣ್ಯದಲ್ಲಿ ಬಿಸಿಲಿನ ತಾಪಕ್ಕೆ ಹುಲ್ಲುಗಳು ಒಣಗಿ ನಿಂತಿವೆ, ಬೆಟ್ಟ, ಬಯಲಿನಲ್ಲಿ ಬೆಳೆದಿದ್ದ ಕುರುಚಲು ಗಿಡಗಳಿಗೆ ಬೆಂಕಿ ತಗುತ್ತಿರುವುದು ಸಾಮಾನ್ಯವಾಗಿದೆ. ಕೆಲವು ಕಿಡಿಗೇಡಿಗಳು ಒಣಹುಲ್ಲಿಗೆ ಬೆಂಕಿ ಹಾಕಿ ದುಷ್ಕೃತ್ಯ ವರ್ತನೆ ತೋರಿಸುತ್ತಿದ್ದಾರೆ ಇದರಿಂದ ಬೆಟ್ಟಗುಡ್ಡಗಳಲ್ಲಿ ಒಣಹುಲ್ಲಿನೊಂದಿಗೆ ಹಸಿರಿನ ಗಿಡಮರಗಳೂ ಬಲಿಯಾಗುತ್ತಿವೆ. ನಂದಗುಡಿ, ಮೋತಕದಹಳ್ಳಿ, ಚೊಕ್ಕಸಂದ್ರ, ಕರಪನಹಳ್ಳಿ, ದಿನ್ನಹಳ್ಳಿ, ಹಳೆಊರು, ರಾಮಗೋವಿಂದಪುರ, ನಾರಾಪುರ, ಇಟ್ಟಸಂದ್ರ, ಚೀಮಸಂದ್ರ, ಅನಪಳ್ಳಿ ಗ್ರಾಮಗಳ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡಗಳು ಸಾಮಾನ್ಯವಾಗಿವೆ.
ಹೆದ್ದಾರಿಗಾಗಿ ಮರಗಳ ಮಾರಣಹೋಮ:
ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ನೆರಳಿನ ಆಸರೆಯಾಗಿದ್ದ ಸಾವಿರಾರು ಮರಗಳನ್ನು ಹೆದ್ದಾರಿ ನಿರ್ಮಾಣಕ್ಕಾಗಿ ಕಡಿಯಲಾಗಿದೆ. ನೀರಿಗಾಗಿ ನಿರ್ಮಿಸಿದ್ದ ಹೊಂಡಗಳು ಮಣ್ಣಿನಿಂದ ಹೂಳು ತುಂಬಿಕೊಂಡು ನೀರು ನಿಲ್ಲದಾಗಿವೆ. ಮೊಲ, ನವಿಲು, ಕಾಡು ಹಂದಿ ಮತ್ತು ಹಲವು ಬಗೆಯ ಪಕ್ಷಿಗಳು ನೀರು ಹುಡುಕಿಕೊಂಡು ಗ್ರಾಮಗಳ ಅಂಚಿಗೆ ಬಂದಾಗ ಬೇಟೆಗಾರರ ಪಾಲಾಗುತ್ತಿವೆ ಇದರಿಂದ ಕಾಡುಪ್ರಾಣಿಗಳು ಅಳಿವಿನಂಚಿಗೆ ತಲುಪುವ ಅಪಾಯ ಎದುರಾಗಿದೆ.
ಅರಣ್ಯ ಪ್ರದೇಶ ಒತ್ತುವರಿ:
ಬೆಟ್ಟದ ತಪ್ಪಲು ಮತ್ತು ಅರಣ್ಯವನ್ನು ಒತ್ತುವರಿ ಮಾಡಿ ಕೆಲವರು ಫಾರ್ಮ್ ಹೌಸ್ ನಿರ್ಮಿಸಿಕೊಳ್ಳುತ್ತಿದ್ದಾರೆ.
ಅರಣ್ಯ ಭೂಮಿ ಒತ್ತುವರಿಯಾಗಿದೆ. ಅಲ್ಲದೆ ಅರಣ್ಯ ಸಮೀಪ ತೋಟಗಳನ್ನು ಮಾಡಿ ಕಾಂಪೌಂಡ್ ನಿರ್ಮಾಣಮಾಡಿಕೊಂಡಿದ್ದಾರೆ. ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರು ದೊರೆಯುತ್ತಿದ್ದ ಸ್ಥಳಗಳು ಇಂದು ಜನ ಸಂಚಾರ ಮತ್ತು ನಾನಾ ಚಟುವಟಿಕೆಗಳ ತಾಣವಾಗಿದೆ.
ತಂತಿಬೇಲಿಯಿಂದ ನೀರಿಗೂ ತತ್ವಾರ:
ಕಾಡುಗಳಲ್ಲಿದ್ದ ನವಿಲುಗಳು ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ, ಸೂಲಿಬೆಲೆ ಹೋಬಳಿ ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದಲ್ಲಿ ಸಮೀಪವಿರುವ ಕೆರೆ, ಗ್ರಾಮದ ತೋಟಗಳ ಸಮೀಪದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಬೆಟ್ಟದಲ್ಲಿನ ಮೊಲ, ನವಿಲು, ಗೌಜುಗನ ಪಕ್ಷಿ, ಕಾಡು ಹಂದಿ, ನರಿಗಳು ನೀರು ಹುಡುಕಿಕೊಂಡು ತೋಟಗಳಿಗೆ ಬರುತ್ತವೆ,ಈ ಮೊದಲು ರೈತರು ಜಮೀನುಗಳ ಸುತ್ತ ತಂತಿಬೇಲಿ ಅಥವಾ ಕಾಂಪೌಂಡ್ ನಿರ್ಮಾಣ ಮಾಡುತ್ತಿರಲಿಲ್ಲ. ಆದರೆ, ಈಗ ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳು ನೀರು ಆಹಾರಕ್ಕೆ ಅಲೆದಾಡುತ್ತಿವೆ.
ಕಲ್ಲುಗಣಿಗಾರಿಕೆ
ನಂದಗುಡಿ ಹೋಬಳಿಯಲ್ಲಿ ನಾನಾ ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅರಣ್ಯ ತಪ್ಪಲಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಅಕ್ರಮ ಮಣ್ಣು ಸಾಗಣೆಯಿಂದ ಅರಣ್ಯದಲ್ಲಿ ನೀರಿನ ಆಸರೆಯಾಗಿದ್ದ ಕುಂಟೆಗಳು, ಹಳ್ಳಗಳು ಬತ್ತಿಹೋಗಿವೆ.
ಅರಣ್ಯ ನಾಶದಿಂದಾಗಿ ಕಾಡುಪ್ರಾಣಿಗಳು ನಾಡಿನತ್ತ ಬರುವಂತಾಗಿದೆ, ಆಹಾರ ಮತ್ತು ನೀರಿನ ಕೊರತೆ, ಹಾಗೂ ವಾಸಸ್ಥಳದ ಅತಿಕ್ರಮಣ ಕಾರಣವಾಗಿದೆ. ಕಾಡ್ಗಿಚ್ಚು, ಕಲ್ಲುಗಣಿಗಾರಿಕೆ ಮತ್ತು ಮಾನವ ಹಸ್ತಕ್ಷೇಪದಿಂದಾಗಿ ಕಾಡಿನ ಸಹಜ ಪರಿಸರ ಹಾನಿಗೊಳಗಾಗಿ, ಪ್ರಾಣಿಗಳು ಆಹಾರ ಹುಡುಕುತ್ತಾ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಹಕಲೆಗೌಡ. ಪರಿಸರ ಪ್ರೇಮಿ ಮತ್ತು ಹೊಸಕೋಟೆ ರೈತ ಸಂಘದ ಅಧ್ಯಕ್ಷ