meeting 
ಬೆಂಗಳೂರು ಗ್ರಾಮಾಂತರ

ಮೃತರ ಖಾತೆಗೆ ಹಣ ಜಮೆ ಸ್ಥಗಿತಗೊಳಿಸಬೇಕು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಖಾತೆಗಳಿಗೆ ಹಣ ಜಮೆ ಆಗುವುದನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ ಸೂಚಿಸಿದರು.
ದೇವನಹಳಿ ಜಿಪಂ ಸಭಾಂಗಣಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ.ಗಳನ್ನು ನೀಡುತ್ತಿದ್ದು. ರಾಜ್ಯದಲ್ಲಿ ಪ್ರತಿ ತಿಂಗಳು 200 ಕೋಟಿ ರೂ.ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಈಗಾಗಲೇ ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸಿ ಎಲ್ಲ ಜಿಲ್ಲೆಗಳಲ್ಲಿ ಮೃತರ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಎಂದು ತೀರ್ಮಾನಿಸಲಾಗಿದೆ. ಅದರಂತೆ ನಮ್ಮ ಜಿಲ್ಲೆಯಲ್ಲಿ ಮೃತರ ಹೆಸರಿನಲ್ಲಿರುವ ಖಾತೆಗಳನ್ನು ಪತ್ತೆ ಹಚ್ಚಬೇಕು ಎಂದು ತಿಳಿಸಿದರು. ಮರಣ ಹೊಂದಿದ ನಂತರ ಎಷ್ಟು ತಿಂಗಳು ಅವರ ಖಾತೆಗೆ ಹಣ ಜಮೆ ಆಗಿದೆ ಅಷ್ಟು ಹಣವನ್ನು ವಾಪಸ್ ಪಡೆಯಬೇಕು. ಜತೆಗೆ ಆ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಹಣ ಜಮೆ ಆಗದಂತೆ ನಿಲ್ಲಿಸಬೇಕು ಎಂದರು.
ಅನ್ನ ಭಾಗ್ಯ ಅಕ್ಕಿ ವಶ:
ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟಿದ್ದ ಖಾಸಗಿ ವ್ಯಕ್ತಿಯ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ? ಎಂದು ಪ್ರಶ್ನಿಸಿದ ರಾಜಣ್ಣ, ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಆಹಾರ ಇಲಾಖೆ ಅಧಿಕಾರಿ ಉತ್ತರಿಸಿ ಈಗಾಗಲೇ ಆ ವ್ಯಕ್ತಿಯ ವಿರುದ್ಧ ಎ್ಐಆರ್ ಮೂಲಕ ಪ್ರಕರಣ ದಾಖಲಿಸಿ, ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿದೆ ಎಂದರು.
ಕಾರ್ಡ್ ರದ್ದತಿಗೆ ಅಸಮಾಧಾನ:
ಬಿಪಿಎಲ್ ಕಾರ್ಡ್‌ಗಳ ಏಕಾಏಕಿ ರದ್ದತಿಗೆ ಅಸಮಾಧಾನ ವ್ಯಕ್ತಪಡಿಸಿದ ಗ್ಯಾರಂಟಿ ಯೋಜನೆ ಸದಸ್ಯರು ಬಡವರು, ಮಧ್ಯಮ ವರ್ಗದವರು ಮಕ್ಕಳ ಶೈಕ್ಷಣಿಕ ಬಿಲ್ ಪಾವತಿ ಉದ್ದೇಶಕ್ಕಾಗಿ, ಅಂಗವಿಕಲರ ಪಿಂಚಣಿ ಸೇರಿ ಇತರೆ ಸರ್ಕಾರಿ ಕೆಲಸಗಳಿಗೆ ರೇಷನ್‌ಕಾರ್ಡ್ ಉಪಯೋಗಿಸಲಾಗುತ್ತಿತ್ತು. ಆದರೆ ಏಕಾಏಕಿ ಬಿಪಿಎಲ್ ಕಾರ್ಡ್ ರದ್ದತಿಯಿಂದ ಹಲವರಿಗೆ ಅನಾನುಕೂಲವಾಗಿದೆ ಎಂದು ಹೇಳಿದರು. ವಜಾ ಆಗಿರುವ ಬಿಪಿಎಲ್ ಕಾರ್ಡ್ ಗಳನ್ನು ಖುದ್ದಾಗಿ ಭೇಟಿ ನೀಡಿ ಮರು ಪರಿಶೀಲಿಸಿ ಮತ್ತೆ ಅವರಿಗೆ ಕಾಡ್ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಆಹಾರ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಬಿಪಿಎಲ್ ಕಾರ್ಡ್ ಸ್ಥಗಿತವಾಗಿದೆ, ಹಣಕಾಸು ವಹಿವಾಟು, ಆರ್ಥಿಕ ಸ್ಥಿತಿಗತಿಯನ್ನಾಧರಿಸಿ ಆಟೋಮ್ಯಾಟಿಕ್ ಆಗಿ ಬಿಪಿಎಲ್ ಕಾರ್ಡ್ ಸ್ಥಗಿತವಾಗಿದೆ. ಸದ್ಯಕ್ಕೆ ವಾರ್ಷಿಕ ಆದಾಯದ ಮಿತಿ 1.5 ಲಕ್ಷ ರೂ ಇದೆ. ಮುಂದೆ 3 ಲಕ್ಷ ರೂಗೆ ಆದಾಯದ ಮಿತಿ ಏರಿಕೆ ಮಾಡುವ ಸನ್ನಿವೇಶ ಇದ್ದು ಇದರಿಂದ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲ ಆಗಿಲಿದೆ ಎಂದರು. ಗೃಹ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳ ಬಿಲ್ ಪಾವತಿಗೆ ಬಿಲ್ ಕಲೆಕ್ಟರ್ ಖುದ್ದು ಮೀಟರ್ ರೀಡರ್ ಪರಿಶೀಲಿಸಿ ಎಷ್ಟು ಯೂನಿಟ್ ಬಳಸಿದ್ದಾರೆ ಎಂದು ನಂತರ ಬಿಲ್ ನೀಡಬೇಕು. ಆದರೆ ಕೆಲವು ಭಾಗಗಳಲ್ಲಿ ಏಕಾಏಕಿ ಬಂದು ಮೀಟರ್ ನೋಡದೆ ಬಿಲ್ ನೀಡುವುದು, ದೂರದಲ್ಲಿಯೇ ಬಿಲ್ ಕೊಡುವಂತಹ ಘಟನೆಗಳು ನಡೆದಿವೆ. ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ಬಿಲ್ ಕಲೆಕ್ಟರ್‌ಗಳಿಗೆ ಸೂಕ್ತ ತರಬೇತಿ ನೀಡಿ ಎಂದು ರಾಜಣ್ಣ ತಿಳಿಸಿದರು.
ಯುವನಿಧಿಗೆ ಪ್ರಾಮುಖ್ಯತೆ ನೀಡಿ:
ಜಿಲ್ಲಾ ಪಂಚಾಯತಿ ಸಿಇಒ ಡಾ.ವಸಂತಿ ಅಮರ್ ಮಾತನಾಡಿ, ಪಂಚಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿಗೆ ಪ್ರಾಮುಖ್ಯತೆ ನೀಡಿ, ಯುವನಿಧಿಯೊಂದಿಗೆ ಅವರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಆಯಾ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು, ಕಂಪೆನಿ ಮುಖ್ಯಸ್ಥರ ಸಭೆ ಕರೆದು ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಕ್ರಮ ಕೈಗೊಳ್ಳಿ ಎಂದು ತಾಲೂಕು ಇಒ ಗಳಿಗೆ ಸೂಚಿಸಿದರಲ್ಲದೆ ಉದ್ಯೋಗವಕಾಶದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಕಂಪನಿಗಳಿಗೆ ನಿರ್ದೇಶನ ನೀಡಿ ಎಂದರು.