ವಿಜಯಪುರ ಡೇರಿ ವಾರ್ಷಿಕ ಸಭೆಯಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಕೆ.ವೆಂಕಟೇಶ್​, ಜರೀನಾ ತಾಜ್​ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕೆ.ನಾಗರಾಜ್​, ಉಪಾಧ್ಯಕ್ಷ ವಿ.ಮಂಜಣ್ಣ, ನಿರ್ದೇಶಕರಾದ ವಿ.ರವಿ, ಕೆ.ವೆಂಕಟೇಶ್​, ಎಂ.ಕೆ.ಅನಿಲ್​ ಕುಮಾರ್​, ಎನ್​.ಮನೋಹರ್​, ಆರ್​.ನಾಗರಾಜ್​, ಎ.ವೇಣುಗೋಪಾಲ್​ ಇದ್ದರು. 
ಬೆಂಗಳೂರು ಗ್ರಾಮಾಂತರ

ಹಾಲಿಗೆ 8 ರೂ. ಪ್ರೋತ್ಸಾಹ ಧನ ವಿತರಣೆಗೆ ಕ್ರಮ

ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಮಾಹಿತಿ

ವಿಜಯಪುರ : ಹಾಲು ಖರೀದಿ ದರ ಲೀಟರ್​ಗೆ 10 ರೂ. ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಕನಿಷ್ಠ 8 ರೂ. ಪ್ರೋತ್ಸಾಹಧನ ಸಿಗುವ ವಿಶ್ವಾಸವಿದೆ ಎಂದು ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಹೇಳಿದರು.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ 2025-&26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆಯಿಂದ ಹೈನುಗಾರರು ಹಾಗೂ ಸಂಘ ಇಬ್ಬರಿಗೂ ಲಾಭ ಎಂದರು.

ಸಂಘದ ಅಧ್ಯಕ್ಷ ಕೆ.ನಾಗರಾಜ್​ ಮಾತನಾಡಿ, ಡೇರಿ ಪ್ರಸಕ್ತ ಸಾಲಿನಲ್ಲಿ 15 ಲಕ್ಷ ರೂ. ಲಾಭ ಗಳಿಸಿದೆ ಎಂದರು.

ಪ್ರೋತ್ಸಾಹಧನ ಕೊಟ್ಟಿಲ್ಲ : ಸರ್ಕಾರದಿಂದ ಒಂದು ಲೀಟರ್​ಗೆ 5 ರೂ.ಪ್ರೋತ್ಸಾಹಧನ ಇದ್ದರೂ ಒಕ್ಕೂಟದಿಂದ ಕೊಡುವ 1 ರೂ.ಕೊಟ್ಟು, 5 ರೂ. ಕೊಟ್ಟಿಲ್ಲ. ಈ ಬಗ್ಗೆ ಸಂಘದಲ್ಲಿ ನಾವು ಪ್ರಶ್ನೆ ಮಾಡಿದರೆ, ಕೊಬ್ಬಿನಾಂಶ ಮತ್ತು ಎಸ್​ಎನ್​ಎಫ್​ ಬಂದವರಿಗೆ ಮಾತ್ರ 5 ರೂ. ಪ್ರೋತ್ಸಾಹಧನ ಕೊಡಲಾಗುತ್ತಿದೆ ಎನ್ನುತ್ತಾರೆ. ನಾವು ಗುಣಮಟ್ಟದ ಹಾಲು ಪೂರೈಸಿದರೂ ಸಹಾಯಧನ ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯರು ರಾಸು ಮುಟ್ಟಲ್ಲ : ರೈತ ಕೃಷ್ಣಪ್ಪ ಮಾತನಾಡಿ, ಹಸುಗಳು ಅನಾರೋಗ್ಯಕ್ಕೆ ಒಳಗಾದಾಗ ಡೇರಿ ಮೂಲಕ 40 ರೂ. ಕೊಟ್ಟು ಕೂಪನ್​ ಹಾಕಿದರೆ ವೈದ್ಯರು ಬರುತ್ತಾರೆ. ಹಸುಗಳನ್ನೆ ಮುಟ್ಟುವುದಿಲ್ಲ, ದೂರದಿಂದಲೇ ಇಂಜೆಕ್ಷನ್​ ಹಾಕುತ್ತಾರೆ. ಕೆಲವರು ಕಾರಿನಿಂದಲೂ ಇಳಿಯುವುದಿಲ್ಲ. ಸರಿಯಾಗಿ ಔಷಧವನ್ನೂ ತರುವುದಿಲ್ಲ. ಇಂತಹವರನ್ನು ನಂಬಿಕೊಂಡು ನಾವು ಏನು ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂವರಿಗೆ ವರ್ಗಾವಣೆ ಶಿಕ್ಷೆ : ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಬಮುಲ್​ನಿರ್ದೇಶಕ ಮುನಿರಾಜು, ಕರ್ತವ್ಯ ಲೋಪವೆಸಗಿದ ಮೂವರು ವೈದ್ಯರನ್ನು ವರ್ಗಾವಣೆ ಮಾಡಿಸಿದ್ದೇವೆ. ಗುಣಮಟ್ಟದ ಹಾಲು ಉತ್ಪಾದನೆಗಾಗಿ ಗುಣಮಟ್ಟದ ಫೀಡ್​ ವಿತರಣೆಗೂ ಕ್ರಮ ಕೈಗೊಂಡಿದ್ದೇವೆ. ಚಿಕ್ಕನಹಳ್ಳಿ ಡೇರಿಯಲ್ಲೂ ಸೈಲೇಜ್​ ಮಾಡಿಸುತ್ತಿದ್ದೇವೆ. ಉತ್ಪಾದಕರು ಉಪಯೋಗ ಮಾಡಿಕೊಳ್ಳಬಹುದು, ಮ್ಯಾಟ್​ ವಿತರಣೆ, ಮೇವು ಕತ್ತರಿಸುವ ಯಂತ್ರ ಹಾಗೂ ಹಾಲು ಕರೆಯುವ ಯಂತ್ರಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ನಿರ್ದೇಶಕರಾದ ಸುಹಾಸ್​, ಮುನಿಶಾಮಪ್ಪ, ಎನ್​.ಲಕ್ಷಿ$್ಮನಾಗರಾಜ್​, ಗೌರಮ್ಮದೇವರಾಜ್​, ಎಂ.ಮುರಳಿ, ಮಾಜಿ ಅಧ್ಯಕ್ಷ ಕೆ.ವಿ.ಮುನಿರಾಜು, ಮುಖ್ಯ ಕಾರ್ಯನಿರ್ವಾಹಕ ಎನ್​.ಮಂಜುನಾಥ್​ ಹಾಗೂ ಸಿಬ್ಬಂದಿ ಇದ್ದರು.